Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 26 - ಕನ್ನಡ ಸತ್ಯವೇದವು C.L. Bible (BSI)

1 ಬೇಸಿಗೆಯಲ್ಲಿ ಮಂಜು ಬೀಳುತ್ತದೆಯೇ? ಸುಗ್ಗಿಯಲ್ಲಿ ಮಳೆ ಬರುತ್ತದೆಯೇ? ಹಾಗೆಯೆ ಬುದ್ಧಿಹೀನನಿಗೆ ತೋರುವ ಮಾನಮರ್ಯಾದೆ.

2 ಕುಪ್ಪಳಿಸುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯಂತೆ, ಕಾರಣವಿಲ್ಲದೆ ಕೊಟ್ಟ ಶಾಪ ಗಾಳಿ ಪಾಲಾಗುತ್ತದೆ.

3 ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನಿಗಾದರೊ ಬೆನ್ನಿಗೆ ಬೆತ್ತ.

4 ಮೂಢನ ಪ್ರಶ್ನೆಗೆ ಉತ್ತರಕೊಡಬೇಡ; ಮೂರ್ಖನಂತೆ ಕೊಟ್ಟರೆ ನೀನೂ ಆದಿಯೇ ಅವನಂತೆ.

5 ಮೂಢನಿಗೆ ಅವನ ಮೂರ್ಖತನ ತಿಳಿಯುವಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.

6 ಮೂಢನನ್ನು ದೂತನನ್ನಾಗಿ ಕಳುಹಿಸುವವನು ತನ್ನ ಕಾಲನ್ನು ತಾನೆ ಕಡಿದುಕೊಳ್ಳುವನು, ತನ್ನ ಕೇಡನ್ನು ತಾನೆ ಕುಡಿಯುವನು.

7 ತುಂಟ ಆಡುವ ಜ್ಞಾನೋಕ್ತಿಯು ಕುಂಟಕಾಲಿನ ಜೋಲಾಟವು.

8 ಮೂಢನಿಗೆ ಕೊಡುವ ಮಾನ ಕವಣೆಗೆ ಕಟ್ಟಿದ ಕಲ್ಲು.

9 ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲು.

10 ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವವನಿಗೆ ಸಮಾನ.

11 ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿ ಬರುವುದು; ಮೂಢನು ತಾನು ಮಾಡಿದ ಮೂರ್ಖತನಕ್ಕೆ ಹಿಂದಿರುಗುವನು.

12 ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು; ಅಂಥವನಿಗಿಂತ ಮೂಢನ ಸುಧಾರಣೆ ಹೆಚ್ಚು ಸಾಧ್ಯ.

13 “ಬೀದಿಯಲ್ಲಿದೆ, ಹೊರಗೆ ಓಡಾಡುತ್ತಿದೆ ಸಿಂಹ", ಇದು ಮೈಗಳ್ಳನ ಪಿಳ್ಳೆಯ ನೆವ.

14 ಕೀಲುಗುಣಿಯಲ್ಲಿ ಬಾಗಿಲು ತಿರುಗುವಂತೆ ಸುತ್ತಾಡುತ್ತಾನೆ ಸೋಮಾರಿ ಹಾಸಿಗೆಯಲ್ಲೆ.

15 ಮೈಗಳ್ಳ ಕೈಹಾಕುತ್ತಾನೆ ತುತ್ತಿಗೆ, ಅದನ್ನು ಬಾಯಿಗೆ ಎತ್ತಲಾರದಷ್ಟು ಆಯಾಸ ಅವನಿಗೆ.

16 ವಿವೇಕದಿಂದ ಉತ್ತರಿಸಬಲ್ಲ ಏಳು ಬುದ್ಧಿವಂತರಿಗಿಂತ ತಾನೇ ಜ್ಞಾನಿ ಎಂದುಕೊಳ್ಳುತ್ತಾನೆ ಸೋಮಾರಿ.

17 ಬೇರೆಯವರ ವ್ಯಾಜ್ಯದಲ್ಲಿ ತಲೆಹಾಕುವವನು ಬೀದಿ ನಾಯಿಯ ಬಾಲ ಎಳೆದ ದಾರಿಹೋಕನಿಗೆ ಸಮಾನನು.

18 ನೆರೆಯವನನ್ನು ಮೋಸಗೊಳಿಸಿ “ತಮಾಷೆಗಾಗಿ ಮಾಡಿದೆ” ಎನ್ನುವನವನು

19 ಬೆಂಕಿಕೊಳ್ಳಿಗಳನ್ನೂ ಕೊಲ್ಲುವ ಬಾಣಗಳನ್ನೂ ಬೀರುವ ದೊಡ್ಡ ಹುಚ್ಚನಿಗೆ ಸಮಾನನು.

20 ಸೌದೆಯಿಲ್ಲದಿದ್ದರೆ ಬೆಂಕಿ ಆರುವುದು; ಚಾಡಿಕೋರನಿಲ್ಲದಿದ್ದರೆ ಜಗಳ ಶಮನವಾಗುವುದು.

21 ಕೆಂಡಕ್ಕೆ ಇದ್ದಲುಬೇಕು, ಬೆಂಕಿಗೆ ಸೌದೆ ಬೇಕು; ವ್ಯಾಜ್ಯ ಕೆರಳಿಸಲು ಜಗಳಗಂಟಿ ಇರಲೇಬೇಕು.

22 ಚಾಡಿಕೋರನ ಮಾತು ರುಚಿಕರವಾದ ತುತ್ತು; ಹೊಟ್ಟೆಯೊಳಕ್ಕೆ ಗುಳುಕ್ಕನೆ ಇಳಿಯುತ್ತದೆ ಅದು.

23 ಕೆಟ್ಟ ಹೃದಯದಿಂದ ಸವಿನುಡಿಯು ತುಟಿ, ಬೆಳ್ಳಿ ಮೆರುಗಿನಿಂದ ಥಳಿಸುವ ಮಣ್ಣಿನ ಬೋಕಿ.

24 ಹಗೆಗಾರನ ತುಟಿಯಲ್ಲಿ ಸ್ನೇಹಭಾವದ ನಟನೆ; ಹೊಟ್ಟೆಯಲ್ಲಾದರೊ ಹುದುಗಿದೆ ವಂಚನೆ.

25 ಹಗೆಗಾರ ಸವಿನುಡಿದರೂ ನಂಬಬೇಡ; ಹೃದಯದಲ್ಲಿದೆ ಏಳ್ಮಡಿ ಹೇಯ ಕೃತ್ಯ.

26 ಹಗೆಯನ್ನು ವಂಚನೆಯಿಂದ ಮರೆಮಾಚಿದ್ದರೂ ಸಭೆಯಲ್ಲಿ ಕೆಟ್ಟತನ ಬಟ್ಟಬಯಲಾಗದಿರದು.

27 ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಹೊರಳಿಸುವವನ ಮೇಲೆಯೆ ಗುಂಡು ಹೊರಳುವುದು.

28 ಸುಳ್ಳುನಾಲಿಗೆ ಹಗೆಮಾಡುತ್ತದೆ ಸತ್ಯವನ್ನು; ಹೊಗಳುಭಟ್ಟನ ಬಾಯಿ ತರುತ್ತದೆ ನಷ್ಟವನ್ನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು