ಜ್ಞಾನೋಕ್ತಿಗಳು 24 - ಕನ್ನಡ ಸತ್ಯವೇದವು C.L. Bible (BSI)- 19 - 1 ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. ಅವರ ಒಡನಾಟವನ್ನು ಬಯಸಬೇಡ. 2 ಅವರ ಮನಸ್ಸು ಯೋಚಿಸುವುದು ಹಿಂಸೆಯನ್ನು, ಅವರ ತುಟಿ ಪ್ರಸ್ತಾಪಿಸುವುದು ಹಾನಿಯನ್ನು. - 20 - 3 ಮನೆಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಗೊಳಿಸುವುದಕ್ಕೆ ವಿವೇಕವೇ ಆಧಾರ. 4 ಮೌಲ್ಯವೂ ಸುಂದರವೂ ಆದವುಗಳಿಂದ ಅದರ ಕೋಣೆಗಳನ್ನು ತುಂಬಿಸಲು ತಿಳುವಳಿಕೆಯೇ ಉಪಕರಣ. - 21 - 5 ಬಲವಂತನಿಗಿಂತ ಬುದ್ಧಿವಂತ ಶಕ್ತಿಶಾಲಿ; ಶೂರನಿಗಿಂತ ಜ್ಞಾನಿಯೇ ಬಲಶಾಲಿ. 6 ಬುದ್ಧಿವಂತನು ನಾಯಕನನ್ನಿಟ್ಟು ಯುದ್ಧ ನಡೆಸುವನು; ಸುಮಂತ್ರಿಗಳು ಹಲವರಿದ್ದರೆ ಸಂರಕ್ಷಣೆಯಿರುವುದು. - 22 - 7 ಜ್ಞಾನವು ಮೂರ್ಖನಿಗೆ ಎಟುಕದಷ್ಟು ಎತ್ತರ; ನ್ಯಾಯಸ್ಥಾನದಲ್ಲಿ ಅವನು ಬಾಯಿಬಿಡಲಾರ. - 23 - 8 ಕೇಡನ್ನು ಯೋಚಿಸುವವನು ತುಂಟನು ಎನಿಸಿಕೊಳ್ಳುವನು. 9 ಮೂರ್ಖನ ಯೋಜನೆ ಪಾಪಮಯ; ಕುಚೋದ್ಯನು ಜನರಿಂದ ತಿರಸ್ಕೃತನು. - 24 - 10 ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನಿನ್ನ ಬಲವು ಅಸಮರ್ಪಕವಾದುದೆ. - 25 - 11 ಮರಣಕ್ಕೆ ಒಯ್ಯಲ್ಪಟ್ಟವನನ್ನು ಬಿಡಿಸಲು ಯತ್ನಿಸು; ಕೊಲೆಗೆ ಗುರಿಯಾದವನನ್ನು ತಪ್ಪಿಸಲು ಯತ್ನಿಸು. 12 ಈ ಸಂಗತಿ ಗೊತ್ತಿರಲಿಲ್ಲವೆಂದು ನೆವ ಹೇಳಬೇಡ; ಅಂತರಂಗ ಪರಿಶೋಧಕನಿಗೆ ನಿನ್ನ ಯೋಜನೆ ತಿಳಿದಿಲ್ಲವೆ? ನಿನ್ನ ಮನಸ್ಸನ್ನು ಸಮೀಕ್ಷಿಸುವ ಆತನಿಗೆ ಇದು ಮರೆಯೇ? ಮಾನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನಾತ ನೀಡುವನಲ್ಲವೆ? - 26 - 13 ಮಗನೇ, ಜೇನು ತಿನ್ನು, ಅದು ಚೆನ್ನಾಗಿದೆ; ತೊಟ್ಟಿಕ್ಕುವ ಜೇನುತುಪ್ಪ ನಿನ್ನ ಬಾಯಿಗೆ ಸಿಹಿ ಅಲ್ಲವೇ? 14 ಅಂತೆಯೇ ಜ್ಞಾನ ನಿನ್ನ ಆತ್ಮಕ್ಕೆ ಸಿಹಿಯೆಂದು ತಿಳಿ; ಅದನ್ನು ಪಡೆದೆಯಾದರೆ ನಿನ್ನ ಭವಿಷ್ಯ ಶುಭಕರ, ನಿನ್ನ ನಿರೀಕ್ಷೆ ಆಗದು ನಿರರ್ಥಕ. - 27 - 15 ದುಷ್ಟನೇ, ನೀತಿವಂತನ ಮನೆಗೆ ಕನ್ನಹಾಕಬೇಡ; ಅವನು ಕೂಡಿಸಿದ್ದನ್ನು ಕೊಳ್ಳೆಹೊಡೆಯಬೇಡ. 16 ನೀತಿವಂತನು ಏಳುಸಾರಿ ಬಿದ್ದರೂ ಮತ್ತೆ ಏಳುವನು; ದುಷ್ಟನು ಕೇಡುಬಂದಾಗಲೆ ಕುಸಿದು ಬೀಳುವನು. - 28 - 17 ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ; ಎಡವಿದರೆ ಮನೋಲ್ಲಾಸ ಪಡಬೇಡ. 18 ಸರ್ವೇಶ್ವರ ನಿನ್ನ ಹರ್ಷವನ್ನು ಕಂಡು ಬೇಸರಗೊಂಡಾನು; ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಿಬಿಟ್ಟಾನು. - 29 - 19 ಕೆಡುಕರನ್ನು ಕಂಡು ಉರಿಗೊಳ್ಳಬೇಡ; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. 20 ಕೆಟ್ಟವನಿಗೆ ಶುಭಕಾಲ ಬಾರದು, ದುಷ್ಟರ ದೀಪ ಆರಿಹೋಗುವುದು. -30 - 21 ಮಗನೇ, ಸರ್ವೇಶ್ವರನಿಗೂ ರಾಜನಿಗೂ ಭಯಪಡು; ಅವರನ್ನು ವಿರೋಧಿಸುವವರ ಗೊಡವೆಗೆ ಹೋಗಬೇಡ. 22 ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸೀತು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು? ಬೇರೆ ಕೆಲವು ಹೇಳಿಕೆಗಳು 23 ಜ್ಞಾನಿಗಳ ಬೇರೆ ಕೆಲವು ಹೇಳಿಕೆಗಳು ಇವು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತ ಸರಿಯಲ್ಲ. 24 ಅಪರಾಧಿಗೆ “ನೀನು ನಿರಪರಾಧಿ” ಎಂದು ತೀರ್ಪು ಕೊಡುವವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು. 25 ತಪ್ಪುಮಾಡಿದವರನ್ನು ದಂಡಿಸುವವರಿಗೆ ಶುಭವಾಗುವುದು, ಸುಖಕರವಾದ ಆಶೀರ್ವಾದವು ಅವರಿಗೆ ಲಭಿಸುವುದು. 26 ಸತ್ಯವಾದ ಉತ್ತರ ತುಟಿಗೊಂದು ಚುಂಬನ. 27 ಕೆಲಸದ ಸಾಮಾನುಗಳನ್ನು ಆಣೆಮಾಡು, ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆ ಬಳಿಕ ಮನೆ ಕಟ್ಟಲು ತೊಡಗು. 28 ನೆರೆಯವನಿಗೆ ವಿರುದ್ಧ ಆಧಾರವಿಲ್ಲದ ಸಾಕ್ಷಿಹೇಳಬೇಡ; ಮಾತಿನಲ್ಲಿ ಅವನಿಗೆ ಮೋಸಮಾಡಬೇಡ. 29 “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆ, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆ” ಎನ್ನಬೇಡ. 30 ಸೋಮಾರಿಯ ಹೊಲದ ಮೇಲೆ ನಡೆದುಹೋದೆ; ಮತಿಗೆಟ್ಟವನ ತೋಟದ ಮೇಲೆ ಹಾದುಹೋದೆ. 31 ಅವುಗಳಲ್ಲಿ ಮುಳ್ಳುಗಿಡಗಳು ಹರಡಿಕೊಂಡಿದ್ದವು, ಕಳೆಗಳು ಮುಚ್ಚಿಕೊಂಡಿದ್ದವು, ಕಲ್ಲಿನಗೋಡೆ ಹಾಳಾಗಿತ್ತು. 32 ಅದನ್ನು ನೋಡಿ ಚಿಂತಿಸತೊಡಗಿದೆ; ಆ ದೃಶ್ಯದಿಂದ ಈ ಪಾಠ ಕಲಿತೆ: 33 “ಇನ್ನೂ ಸ್ವಲ್ಪ ನಿದ್ರೆ, ಇನ್ನೂ ತುಸು ತೂಕಡಿಕೆ, ಕೈ ಮುದುಡಿಕೊಂಡು ಇನ್ನೂ ಕೊಂಚ ಮಲಗಿಕೊಳ್ಳುವೆ” ಎನ್ನುವೆಯಾ? 34 ಆಗ ಬಡತನ ಎರಗುವುದು ದಾರಿಗಳ್ಳನಂತೆ; ಕೊರತೆಯು ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India