ಜ್ಞಾನೋಕ್ತಿಗಳು 23 - ಕನ್ನಡ ಸತ್ಯವೇದವು C.L. Bible (BSI)- 6 - 1 ಒಡೆಯನ ಸಂಗಡ ಊಟಕ್ಕೆ ಕುಳಿತುಕೊಂಡಾಗ ಯಾರ ಮುಂದಿರುವೆ ಎಂಬುದನ್ನು ಮರೆಯಬೇಡ. 2 ತಡೆಯಲಾಗದ ಹಸಿವು ನಿನಗಿದ್ದರೂ ಕಂಠದಲ್ಲಿ ಕತ್ತಿಯಿರುವಂತೆ ಸಂಯಮದಿಂದಿರು. 3 ಒಡೆಯನ ರುಚಿಪದಾರ್ಥಗಳನ್ನು ಬಯಸಬೇಡ. ಅವುಗಳಲ್ಲಿ ಮರೆಮೋಸ ಅಡಗಿರಲು ಸಾಧ್ಯ. - 7 - 4 ದುಡ್ಡಿನಾಸೆಗಾಗಿಯೆ ದುಡಿಯಬೇಡ; ಬುದ್ಧಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಮಾಡಬೇಡ. 5 ನಿನ್ನ ದೃಷ್ಟಿ ಅದರ ಮೇಲೆ ಬೀಳುವಷ್ಟರಲ್ಲೆ ಅದು ಮಾಯ, ರೆಕ್ಕೆ ಕಟ್ಟಿಕೊಂಡ ಗರುಡನಂತೆ ಆಗಸದತ್ತ ಅದರ ಓಟ. - 8 - 6 ಜಿಪುಣ ದೃಷ್ಟಿಯವನು ಬಡಿಸುವ ಅನ್ನವನ್ನು ಉಣಬೇಡ; ಅವನ ರುಚಿಪದಾರ್ಥಗಳನ್ನು ಬಯಸಬೇಡ. 7 ಅವನು ತನ್ನ ಮನದಲ್ಲೆ ಲೆಕ್ಕಿಸುತ್ತಿರುತ್ತಾನೆ “ಉಣ್ಣು, ಕುಡಿ” ಎಂದರೂ; ಅವನಿಗಿಲ್ಲ ನಿನ್ನ ಮೇಲೆ ಅಕ್ಕರೆ. 8 ನೀನು ತಿಂದ ತುತ್ತನ್ನೆ ಕಕ್ಕಿ ಬಿಡುವೆ, ನೀನು ಆಡಿದ ಸವಿಮಾತೆಲ್ಲ ವ್ಯರ್ಥವೆ. - 9 - 9 ಮೂಢನ ಸಂಗಡ ಮಾತನಾಡಬೇಡ; ನಿನ್ನ ಬುದ್ಧಿಮಾತನ್ನು ಅವನು ಮಾನ್ಯಮಾಡ. - 10 - 10 ಪುರಾತನ ಎಲ್ಲೆ ಗುರುತನ್ನು ಒತ್ತರಿಸಬೇಡ; ಅನಾಥರ ಹೊಲಗದ್ದೆಯನ್ನು ಆಕ್ರಮಿಸಬೇಡ. 11 ಅವರನ್ನು ಕಾಪಾಡುವ ಸರ್ವೇಶ್ವರ ಬಲಶಾಲಿ, ಆತ ನಿನ್ನೊಡನೆ ವಾದಿಸಬಲ್ಲ ಅವರ ಪರವಾಗಿ. - 11 - 12 ಉಪದೇಶವನ್ನು ಕೇಳುವುದರತ್ತ ಮನಸ್ಸಿಡು; ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು. - 12 - 13 ಮಕ್ಕಳನ್ನು ದಂಡಿಸಿ ತಿದ್ದಲು ಹಿಂಜರಿಯಬೇಕಾಗಿಲ್ಲ; ಬೆತ್ತದ ಏಟಿಗೆ ಅವರು ಸತ್ತುಹೋಗುವುದಿಲ್ಲ. 14 ಬೆತ್ತದಿಂದ ಬೇಕಾದರೆ ಹೊಡೆ; ಮಗುವಿನ ಆತ್ಮ ಪಾತಾಳಕ್ಕೆ ಬೀಳದಂತೆ ತಡೆ. - 13 - 15 ಮಗನೇ, ನೀನು ಬುದ್ಧಿವಂತನಾದರೆ ಆನಂದವೇ ಆನಂದ ನನ್ನ ಮನಸ್ಸಿಗೆ. 16 ನಿನ್ನ ಬಾಯಿಂದ ಹಿತೋಕ್ತಿಗಳು ಬಂದರೆ ಸಂತೋಷ ನನ್ನ ಅಂತರಾತ್ಮಕ್ಕೆ. - 14 - 17 ಪಾಪಿಗಳನ್ನು ನೋಡಿ ಅಸೂಯೆಪಡಬೇಡ; ಸರ್ವೇಶ್ವರನಲ್ಲಿರಲಿ ನಿರಂತರ ಭಯಭಕ್ತಿ. 18 ಆಗ ನಿನ್ನ ಭವಿಷ್ಯ ಶುಭದಾಯಕವಾಗಿರುವುದು, ನಿನ್ನ ನಿರೀಕ್ಷೆ ಸಾರ್ಥಕವಾಗುವುದು. - 15 - 19 ಮಗನೇ ಕೇಳು, ಬುದ್ಧಿವಂತನಾಗಿರು, ನಿನ್ನ ಮನಸ್ಸನ್ನು ಸನ್ಮಾರ್ಗದತ್ತ ಹರಿಸು. 20 ಕುಡುಕರೊಡನೆ, ಹೊಟ್ಟೆಬಾಕರೊಡನೆ ಸೇರಬೇಡ; ಮಿತಿಮೀರಿ ಮಾಂಸ ತಿನ್ನುವ ಜನರ ಜೊತೆ ನಿನಗೆ ಬೇಡ. 21 ಕುಡುಕನಿಗೂ ಹೊಟ್ಟೆಬಾಕನಿಗೂ ಕಾದಿದೆ ದುರ್ಗತಿ; ಹರಕು ಬಟ್ಟೆಗಳನ್ನು ಹೊದಿಸುವುದು ಅವರ ನಿದ್ರಾಸಕ್ತಿ. - 16 - 22 ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನ ತಾಯಿಯನ್ನು ಅಸಡ್ಡೆಮಾಡದಿರು. 23 ಸತ್ಯವನ್ನು, ಅಂದರೆ ಜ್ಞಾನ, ಸುಶಿಕ್ಷೆ, ವಿವೇಕ ಇವನ್ನು ಬೆಲೆಕೊಟ್ಟಾದರೂ ಕೊಂಡುಕೊ, ಮಾರಿಬಿಡಬೇಡ! 24 ನೀತಿವಂತನ ತಂದೆಗೆ ಅತಿ ಸಂತೋಷ; ಜ್ಞಾನಿಯನ್ನು ಹೆತ್ತವನಿಗೆ ಅತಿ ಉಲ್ಲಾಸ. 25 ಹರ್ಷಗೊಳಿಸು ನಿನ್ನ ತಂದೆತಾಯಿಗಳನ್ನು; ಆನಂದಪಡಿಸು ನಿನ್ನ ಹೆತ್ತವಳನ್ನು. - 17 - 26 ಮಗನೇ, ನಾನು ಹೇಳುವುದು ನಾಟಲಿ ನಿನ್ನ ಮನಸ್ಸಿಗೆ; ನನ್ನ ನಡತೆ ಆದರ್ಶಕವಾಗಿರಲಿ ನಿನ್ನ ಕಣ್ಣುಗಳಿಗೆ. 27 ವೇಶ್ಯೆ ಒಂದು ಆಳವಾದ ಬಾವಿ; ವ್ಯಭಿಚಾರಿಣಿ ಇಕ್ಕಟ್ಟಾದ ಗುಳಿ. 28 ಆಕೆ ಕಳ್ಳನಂತೆ ಹೊಂಚುಹಾಕುತ್ತಾಳೆ; ಅನೇಕರನ್ನು ದ್ರೋಹಿಗಳನ್ನಾಗಿಸುತ್ತಾಳೆ. - 18 - 29 ಕಿರಿಚಾಟ, ಕೂಗಾಟ, ಕಿತ್ತಾಟ, ಗೋಳಾಟವು ನಿರ್ನಿಮಿತ್ತ ಹುಣ್ಣು, ಕೆಂಪೇರಿದ ಕಣ್ಣು; ಇವುಗಳನ್ನು ಅನುಭವಿಸುವವರು ಯಾರು? 30 ಮಿಶ್ರಮದ್ಯಪಾನಗಳಲ್ಲಿ ಆಸಕ್ತನಾಗಿರುವವನೇ, ದ್ರಾಕ್ಷಾರಸ ಕುಡಿಯುತ್ತ ಕಾಲಹರಣ ಮಾಡುವವನೇ. 31 ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ, ಗಂಟಲಿನೊಳಗೆ, ಸುಲಭವಾಗಿ, ಇಳಿಯುವ, ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ. 32 ಕುಡಿದಾದ ಮೇಲೆ ಅದು ಹಾವಿನಂತೆ ಕಚ್ಚುವುದು; ಹೌದು, ವಿಷಸರ್ಪದಂತೆ ಕಡಿಯುವುದು. 33 ನಿನ್ನಾ ಕಣ್ಣು ಇಲ್ಲದ್ದನ್ನೇ ಕಾಣುವುದು; ಮನಸ್ಸು ವಕ್ರವಾದುವುಗಳನ್ನೇ ಹೊರಪಡಿಸುವುದು. 34 ನೀನು ಸಮುದ್ರ ಮಧ್ಯದಲ್ಲಿ ಮಲಗಿ ಇರುವವನಂತೆ ಇರುವೆ, ಹಡಗಿನ ಕಂಬದ ತುದಿಯಲ್ಲಿ ನಿದ್ರಿಸುವವನಂತೆ ಇರುವೆ. 35 “ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ; ಬಡಿದರೂ ನನಗೆ ತಿಳಿಯಲಿಲ್ಲ; ಎಚ್ಚರವಾಗುವುದು ಯಾವಾಗ? ಮತ್ತೆ ಒಂದು ಸಾರಿ ಕುಡಿಯುವೆನು” ಎಂದುಕೊಳ್ಳುವೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India