ಜ್ಞಾನೋಕ್ತಿಗಳು 22 - ಕನ್ನಡ ಸತ್ಯವೇದವು C.L. Bible (BSI)1 ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತ ಪ್ರೀತಿ ವಿಶ್ವಾಸ ಅಮೂಲ್ಯ. 2 ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರು; ಅವರೆಲ್ಲರನ್ನು ಸೃಷ್ಟಿಸಿದಾತ ಸರ್ವೇಶ್ವರನು. 3 ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ. 4 ಸರ್ವೇಶ್ವರನಲ್ಲಿ ಭಯಭಕ್ತಿ ದೀನಮನೋಭಾವ, ಇವು ನೀಡುವ ಫಲ-ಸಂಪತ್ತು, ಸನ್ಮಾನ, ಆಯುಸ್ಸು. 5 ವಕ್ರಬುದ್ಧಿಯುಳ್ಳವನ ಹಾದಿತುಂಬ ಮುಳ್ಳು, ಉರುಳು; ಅದರಿಂದ ದೂರವಿರುವನು ಪ್ರಾಣದಾಸೆಯುಳ್ಳವನು. 6 ಬಾಲ್ಯದಲ್ಲೇ ಮಕ್ಕಳನ್ನು ಸರಿದಾರಿಯಲ್ಲಿ ಪಳಗಿಸು; ಮುಪ್ಪಿನಲ್ಲೂ ಅವರು ಆ ಪದ್ಧತಿ ಮೀರಿ ನಡೆಯದಿರಲಿ. 7 ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ. 8 ಕೆಟ್ಟತನವನ್ನು ಬಿತ್ತುವವನು ಕೇಡನ್ನೆ ಕೊಯ್ಯುವನು; ಅವನ ಸಿಟ್ಟು ಅವನನ್ನೆ ಸುಟ್ಟುಬಿಡುವುದು. 9 ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು. 10 ಕುಚೋದ್ಯನನ್ನು ಓಡಿಸಿಬಿಟ್ಟರೆ ಜಗಳ ನಿಲ್ಲುವುದು, ವ್ಯಾಜ್ಯ ಮುಗಿಯುವುದು, ನಿಂದೆ ಅವಮಾನ ಇಲ್ಲದಾಗುವುದು. 11 ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು. 12 ಸರ್ವೇಶ್ವರನ ದೃಷ್ಟಿ ಸಜ್ಜನರನ್ನು ಕಾಯುವುದು; ವಂಚಕರ ಮಾತನ್ನು ನಿರರ್ಥಕಗೊಳಿಸುವುದು. 13 “ಹೊರಗಡೆ ಕಾದಿದೆ ಸಿಂಹ, ಬೀದಿಗೆ ಕಾಲಿಟ್ಟರೆ ತಿಂದುಬಿಡುವುದು!” ಇದು ಮೈಗಳ್ಳನ ಪಿಳ್ಳೆಯ ನೆವ. 14 ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಸರ್ವೇಶ್ವರನಿಗೆ ಸಿಟ್ಟೆಬ್ಬಿಸಿದವನು ಬೀಳುವನು ಅದರಲ್ಲಿ. 15 ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ. 16 ಹಣ ಹೆಚ್ಚಿಸಲು ಬಡವರನ್ನು ಪೀಡಿಸುವವನಿಗೆ, ಲಂಚಕೊಟ್ಟು ಬಲ್ಲಿದರನ್ನು ಒಲಿಸುವವನಿಗೆ, ಕೊರತೆಯೆ ಕಟ್ಟಿಟ್ಟ ಬುತ್ತಿ. ಮುತ್ತಿನಂಥ ಮೂವತ್ತು ಮಾತುಗಳು 17 ಜ್ಞಾನಿಗಳ ನುಡಿಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ಮನಸ್ಸಿನಲ್ಲಿಡು. 18 ಆ ನುಡಿಗಳನ್ನು ನಿನ್ನ ಅಂತರಂಗದಲ್ಲಿ ಕಾದಿಡು; ಅವು ನಿನ್ನ ತುಟಿಯ ಮೇಲೆ ಸಿದ್ಧವಿದ್ದರೆ ಒಳಿತು. 19 ಸರ್ವೇಶ್ವರನಲ್ಲಿ ನೀನು ಭರವಸೆ ಇಡುವಂತೆ, ಅವುಗಳನ್ನು ತಿಳಿಸಿರುವೆನು ಇಂದೆ. 20 ಉಚಿತಾಲೋಚನೆಯನ್ನೂ ತಿಳುವಳಿಕೆಯನ್ನೂ ನೀಡಬಲ್ಲ ಮೂವತ್ತು ವಚನಗಳನ್ನು ನಿನಗೆ ಈ ಮುಂಚೆಯೆ ಬರೆದಿರುವೆನಲ್ಲಾ. 21 ಸತ್ಯವಾದ ಆ ವಚನಗಳು ಎಷ್ಟೋ ಯಥಾರ್ಥವೆಂದು ತಿಳಿದು ನಿನ್ನನ್ನು ಪ್ರಶ್ನಿಸಿದವರಿಗೆ ಅವುಗಳನ್ನು ಅರಿಕೆಮಾಡು. - 1 - 22 ಬಡವರಿಗೆ ದಿಕ್ಕಿಲ್ಲವೆಂದು ಅವರನ್ನು ಶೋಷಣೆಗೆ ಗುರಿಮಾಡಬೇಡ; ನ್ಯಾಯಾಲಯದಲ್ಲಿ ಆ ದಟ್ಟದರಿದ್ರರನ್ನು ಬಾಧಿಸಬೇಡ; 23 ಸರ್ವೇಶ್ವರನೇ ಅವರ ಪರವಾಗಿ ವಾದಿಸುವನು; ಸೂರೆಮಾಡಬಂದವರ ಪ್ರಾಣವನ್ನು ಆತನೆ ಸೂರೆ ಮಾಡುವನು. - 2 - 24 ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ. 25 ಹಾಗೆ ಮಾಡಿದರೆ ಅವರ ದುರ್ನಡತೆಯನ್ನು ಕಲಿತುಕೊಳ್ಳುವೆ, ನಿನ್ನ ಪ್ರಾಣ ಉರುಲಿಗೆ ತುತ್ತಾಗುವುದು, ಎಚ್ಚರಿಕೆ! -3 - 26 ಬೇರೆಯವರ ಸಾಲಕ್ಕೆ ಹೊಣೆಯಾಗಬೇಡ, ಅದಕ್ಕಾಗಿ ಕೈ ಮೇಲೆ ಕೈ ಇಟ್ಟು ಜಾಮೀನು ನಿಲ್ಲಬೇಡ. 27 ಆ ಸಾಲ ತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು? - 4 - 28 ನಿನ್ನ ಪೂರ್ವಜರು ಹಾಕಿರುವ ಎಲ್ಲೆ ಗುರುತನ್ನು, ಸ್ಥಳಾಂತರಿಸಬೇಡ ನೀನು. - 5 - 29 ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India