Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 18 - ಕನ್ನಡ ಸತ್ಯವೇದವು C.L. Bible (BSI)

1 ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು.

2 ಮತಿಗೆಟ್ಟವನಿಗೆ ವಿವೇಕವು ಅನಿಷ್ಟ; ಸ್ವಾರ್ಥವನ್ನು ಪ್ರಕಟಿಸುವುದೆಂದರೆ ಅವನಿಗೆ ಬಲು ಇಷ್ಟ.

3 ದುರಾಚಾರವಿದ್ದಲ್ಲಿ ತಾತ್ಸಾರ; ಮಾನ ಕಳೆದುಕೊಂಡಲ್ಲಿ ಧಿಕ್ಕಾರ.

4 ಸತ್ಪುರುಷನ ನುಡಿ ಜಲನಿಧಿ; ಜ್ಞಾನದ ಬುಗ್ಗೆ ಹರಿಯುವ ತೊರೆ.

5 ದುಷ್ಟನಿಗೆ ಪಕ್ಷಪಾತ ತೋರುವುದು ಸಲ್ಲ; ಸಜ್ಜನನಿಗೆ ನ್ಯಾಯ ತಪ್ಪಿಸುವುದು ಸರಿಯಲ್ಲ.

6 ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ.

7 ಬುದ್ಧಿಹೀನನಿಗೆ ಬಾಯೇ ನಾಶ, ತುಟಿಗಳೇ ಅವನಿಗೆ ಪಾಶ.

8 ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಅಡಿಹೊಟ್ಟೆಗೆ ಇಳಿಯುವ ಕವಳಗಳು.

9 ಸೋಮಾರಿಯಾದ ಕೆಲಸಗಳ್ಳನು, ಕೆಡುಕನಿಗೆ ರಕ್ತಸಂಬಂಧಿಕನು.

10 ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ.

11 ಐಶ್ವರ್ಯವಂತನಿಗೆ ಹಣವೆ ಬಲವಾದ ಕೋಟೆ; ಅದುವೇ ಎತ್ತರವಾದ ಪೌಳಿಗೋಡೆ.

12 ಭಂಗಕ್ಕೆ ಮುಂಚೆ ಗರ್ವದ ಗುಂಡಿಗೆ; ಗೌರವಕ್ಕೆ ಮೊದಲು ನಮ್ರತೆ.

13 ಕೇಳಿಸಿಕೊಳ್ಳದೆ ಉತ್ತರಕೊಡುವವನು ಹುಚ್ಚ; ನಿಂದೆ ಅವಮಾನಕ್ಕೆ ಅವನು ಯೋಗ್ಯ.

14 ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು; ಆತ್ಮವೇ ನೊಂದರೆ ಸಹಿಸುವವರಾರು?

15 ಬುದ್ಧಿವಂತನ ಮನಸ್ಸು ತಿಳುವಳಿಕೆಯನ್ನು ಗಳಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.

16 ಕಾಣಿಕೆ ತರುವವನಿಗೆ ಬಾಗಿಲು ತೆರೆಯುತ್ತದೆ; ಶ್ರೀಮಂತನ ಸಾನ್ನಿಧ್ಯಕ್ಕೂ ಅದು ನಡೆಸುತ್ತದೆ.

17 ಮೊದಲು ವಾದಿಸುವವನು ನ್ಯಾಯವಾದಿಯೆಂದೇ ತೋರುವನು; ಅವನ ಬಂಡವಾಳ ಗೊತ್ತಾಗುವುದು ಪ್ರತಿವಾದಿ ಎದ್ದ ಮೇಲೆ.

18 ಚೀಟುಹಾಕುವುದರಿಂದ ವ್ಯಾಜ್ಯಗಳ ಶಮನ; ಜಟ್ಟಿಗಳ ನಡುವೆ ಕಾಳಗದ ವಿರಾಮ.

19 ಸಹಾಯ ಹೊಂದಿದ ಸೋದರ ದುರ್ಗಕ್ಕಿಂತಲು ದುಸ್ತರ; ಅವನೊಡನೆ ಜಗಳ ಕೋಟೆ ಮನೆಗೆ ಹಾಕಿದ ಅಗುಳಿ.

20 ಬಾಯಿ ಬಿತ್ತಿದ ಬೆಳೆಯಿಂದ ಮನುಷ್ಯ ಹೊಟ್ಟೆ ತುಂಬುವನು; ತುಟಿಗಳು ಕೊಟ್ಟ ಫಲದಿಂದ ತಿಂದು ತೇಗುವನು.

21 ಜನನ ಮರಣಗಳ ಶಕ್ತಿ ನಾಲಿಗೆಗಿದೆ; ವಚನ ಪ್ರಿಯರು ಅದರ ಫಲವನ್ನು ರುಚಿಸುವರು.

22 ಮಡದಿಯನ್ನು ಪಡೆಯುವುದು ಪುಣ್ಯಪಡೆದ ಹಾಗೆ, ಅದು ಸರ್ವೇಶ್ವರನ ಅನುಗ್ರಹಪಡೆದ ಹಾಗೆ.

23 ಬಡವರು ಮಾಡುವ ಬಿನ್ನಹ ನಮ್ರ; ಬಲ್ಲಿದರು ಕೊಡುವ ಬದಲು ಉಗ್ರ.

24 ಗೆಳೆಯರಂತೆ ನಟಿಸಿ ನಾಶಗೊಳಿಸುವವರು ಅನೇಕರುಂಟು; ಸಹೋದರನಿಗಿಂತ ಪ್ರಿಯನಾದ ಸ್ನೇಹಿತನೂ ಉಂಟು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು