Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 16 - ಕನ್ನಡ ಸತ್ಯವೇದವು C.L. Bible (BSI)

1 ಆಲೋಚನೆ ಮಾಡುವುದು ಮನುಷ್ಯನ ಇಚ್ಛೆ; ಅದನ್ನು ಸಫಲವಾಗಿಸುವುದು ಸರ್ವೇಶ್ವರನ ಇಚ್ಛೆ.

2 ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಆದರೆ ಅವನ ಅಂತರಂಗವನ್ನು ವೀಕ್ಷಿಸುವಂಥವನು ಸರ್ವೇಶ್ವರ.

3 ನಿನ್ನ ಕಾರ್ಯಭಾರವನ್ನು ಸರ್ವೇಶ್ವರನಿಗೆ ವಹಿಸು; ಆಗ ಸಫಲವಾಗುವುದು ನಿನ್ನ ಯೋಜನೆಯು.

4 ಸರ್ವೇಶ್ವರ ಒಂದೊಂದನ್ನೂ ಸೃಷ್ಟಿಸಿರುವುದು ಒಂದು ಗುರಿಯಿಟ್ಟೇ ಹೌದು; ಕೆಡುಕರನ್ನು ಉಂಟುಮಾಡಿರುವುದು ಕೇಡಿನ ದಿನಕ್ಕಾಗಿಯೇ.

5 ಗರ್ವಿಷ್ಠನು ಯಾರೇ ಆಗಿರಲಿ, ಅವನು ಸರ್ವೇಶ್ವರನಿಗೆ ಅಸಹ್ಯ; ಅವನಿಗೆ ದಂಡನೆ ತಪ್ಪದು, ಇದು ಖಂಡಿತ.

6 ಪ್ರೀತಿ ಸತ್ಯತೆಗಳಿಂದ ಪಾಪನಿವಾರಣೆ; ಸರ್ವೇಶ್ವರನ ಭಯಭಕ್ತಿಯಿಂದ ಹಾನಿ ನಿವಾರಣೆ.

7 ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.

8 ಅನ್ಯಾಯದಿಂದ ಗಳಿಸಿದ ಅಪಾರ ನಿಧಿಗಿಂತಲು ನ್ಯಾಯದಿಂದ ಕೂಡಿಸಿದ ಅಲ್ಪ ಧನ ಲೇಸು.

9 ಮನುಷ್ಯ ಮನಬಂದಂತೆ ಮಾರ್ಗವನ್ನಾರಿಸಿಕೊಂಡರೂ ಸರ್ವೇಶ್ವರನೇ ಅವನ ನಡತೆಯನ್ನು ಪರಾಂಬರಿಸುವವನು.

10 ದೈವೋಕ್ತಿ ಹೊರಡುವುದು ಅರಸನ ಬಾಯಿಂದ; ತಪ್ಪುಮಾಡದು ಅವನ ಬಾಯಿ ತೀರ್ಪು ನೀಡುವಾಗ.

11 ನ್ಯಾಯದ ತ್ರಾಸುತಕ್ಕಡಿಗಳೆಲ್ಲ ಸರ್ವೇಶ್ವರನ ಏರ್ಪಾಡು; ಚೀಲದ ಕಲ್ಲುತೂಕಗಳೆಲ್ಲ ಆತನ ಕೈಕೆಲಸ.

12 ರಾಜರಲ್ಲಿ ದುಷ್ಟಕಾರ್ಯ ಖಂಡನೀಯ; ಸದಾಚಾರ ಸಿಂಹಾಸನಕ್ಕೆ ನಿಜ ಆಧಾರ.

13 ನೀತಿಯುತ ಮಾತನ್ನು ಅರಸನು ಮೆಚ್ಚುವನು; ಸತ್ಯವಾದಿಯನ್ನು ಆತನು ಪ್ರೀತಿಸುವನು.

14 ಭೂಪನ ಕೋಪ ಮೃತ್ಯುವಿನ ದೂತ; ಅದನ್ನು ಶಮನಪಡಿಸಲು ಜಾಣನು ಶಕ್ತ.

15 ಪ್ರಭುವಿನ ಮುಖಪ್ರಸನ್ನತೆ ಜೀವದ ಒರತೆ; ಆತನ ಕರುಣೆ ಮುಂಗಾರು ಮಳೆ.

16 ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು.

17 ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.

18 ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.

19 ಸೊಕ್ಕಿನವರ ಸಂಗಡ ಸೂರೆಹಂಚಿಕೊಳ್ಳುವುದಕ್ಕಿಂತಲು ದೀನದಲಿತರ ಸಂಗಡ ದೈನ್ಯದಿಂದಿರುವುದು ಮೇಲು.

20 ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು.

21 ಜ್ಞಾನ ಹೃದಯರಿಗೆ ಜಾಣರೆಂಬ ಬಿರುದು; ಮಧುರ ಮಾತಿನಿಂದ ಬೋಧನಾಶಕ್ತಿ ಹಿರಿದು.

22 ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ತಕ್ಕ ದಂಡನೆ.

23 ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ.

24 ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು.

25 ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೆ ಒಯ್ಯುವ ಹಾದಿಯಾಗಬಹುದು.

26 ದುಡಿಯುವವನು ಹೊಟ್ಟೆಪಾಡಿಗಾಗಿ ದುಡಿಯುತ್ತಾನೆ; ಹೊಟ್ಟೆಕಾಟವೆ ಸಾಕು ಅವನನ್ನು ದುಡಿಸಲಿಕ್ಕೆ.

27 ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ಞಾಲೆ ಅವನ ನಾಲಿಗೆ.

28 ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.

29 ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.

30 ಕಣ್ಣುಮಿಟುಕಿಸುವವನು ಕುಯುಕ್ತಿಯನ್ನು ಕಲ್ಪಿಸುತ್ತಾನೆ; ತುಟಿಕಚ್ಚುವವನು ಕೇಡನ್ನು ಸಾಧಿಸುತ್ತಾನೆ.

31 ನರೆಗೂದಲು ಸುಂದರ ಕಿರೀಟ, ಸನ್ನಡತೆಗೆ ಸಿಗುವ ಪ್ರತಿಫಲ.

32 ದೀರ್ಘಶಾಂತನು ಪರಾಕ್ರಮಶಾಲಿಗಿಂತ ಶ್ರೇಷ್ಠ; ತನ್ನನ್ನು ತಾನೆ ಗೆದ್ದವನು ಪಟ್ಟಣ ಗೆದ್ದವನಿಗಿಂತ ಬಲಿಷ್ಠ.

33 ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು