ಜ್ಞಾನೋಕ್ತಿಗಳು 15 - ಕನ್ನಡ ಸತ್ಯವೇದವು C.L. Bible (BSI)1 ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ. 2 ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ. 3 ಸರ್ವೇಶ್ವರನ ದೃಷ್ಟಿ ಸರ್ವವ್ಯಾಪ್ತ; ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಆತನ ನೋಟ. 4 ಸಂತೈಸುವ ನಾಲಿಗೆ ಜೀವವೃಕ್ಷಕ್ಕೆ ಸಮಾನ; ಹಿಂಸಾತ್ಮಕ ನಾಲಿಗೆ ಮನಮುರಿತಕ್ಕೆ ಸಾಧನ. 5 ಮೂರ್ಖನು ತಂದೆಯ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತಾನೆ; ಜಾಣನು ಆತನ ಗದರಿಕೆಯನ್ನೂ ಗಮನಿಸುತ್ತಾನೆ. 6 ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ. 7 ತಿಳುವಳಿಕೆಯ ಬಿತ್ತನೆ ಜ್ಞಾನಿಗಳ ಬಾಯಿಂದ; ದುರುಳರ ಹೃದಯಕ್ಕೆ ಅದು ಅಸಾಧ್ಯ. 8 ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ. 9 ದುರುಳರ ನಡತೆ ಸರ್ವೇಶ್ವರನಿಗೆ ಹೇಯ; ನೀತಿವಂತರ ನಡತೆ ಆತನಿಗೆ ಸುಪ್ರಿಯ. 10 ಸನ್ಮಾರ್ಗವನ್ನು ತೊರೆದವನಿಗೆ ಬರುವ ಶಿಕ್ಷೆ ಕಠಿಣ ಬುದ್ಧಿವಾದವನ್ನು ಕೇಳಲೊಲ್ಲದವನಿಗೆ ಬರುವುದು ಮರಣ. 11 ಸರ್ವೇಶ್ವರನ ಕಣ್ಣಿಗೆ ನರಕಪಾತಾಳಗಳೇ ಬಟ್ಟಬಯಲಾಗಿರಲು; ನರಮಾನವರ ಹೃದಯ ಆತನಿಗೆ ಮುಚ್ಚುಮರೆಯೇ? 12 ಕುಚೋದ್ಯನಿಗೆ ಬೇಡ ಬುದ್ಧಿವಾದ; ಅವನಿಗೆ ಬೇಡ ಜ್ಞಾನಿಗಳ ಸತ್ಸಂಘ. 13 ಹರ್ಷಹೃದಯದಿಂದ ಮುಖ ಅರಳುವುದು; ಮನೋವ್ಯಥೆಯಿಂದ ಚೈತನ್ಯ ಕುಂದುವುದು. 14 ವಿವೇಕಿಯ ಮನ ತಿಳುವಳಿಕೆಯನ್ನು ಅರಸುವುದು; ಮತಿಹೀನನ ಬಾಯಿ ಮೂರ್ಖತನವನ್ನು ಮುಕ್ಕುವುದು. 15 ದಲಿತರ ದಿನಗಳೆಲ್ಲ ದುಃಖಭರಿತ; ಹರ್ಷ ಹೃದಯನಿಗೆ ಸದಾ ಹಬ್ಬದಾನಂದ. 16 ನೆಮ್ಮದಿಯಿಲ್ಲದ ಸಿರಿಸಂಪತ್ತಿಗಿಂತಲು, ಸರ್ವೇಶ್ವರನ ಭಯಭಕ್ತಿಯಿಂದ ಕೂಡಿದ ಕಿಂಚಿತ್ತೇ ಮೇಲು. 17 ದ್ವೇಷವಿರುವಲ್ಲಿ ಕೊಬ್ಬಿದ ಮಾಂಸಭೋಜನಕ್ಕಿಂತ, ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಲೇಸು. 18 ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದೀರ್ಘಶಾಂತನು ಜಗಳ ತೀರಿಸುತ್ತಾನೆ. 19 ಸೋಮಾರಿಯ ದಾರಿ ಮುಳ್ಳಿನ ಬೇಲಿ; ಸಜ್ಜನರ ಮಾರ್ಗ ರಾಜಬೀದಿ. 20 ಬುದ್ಧಿವಂತ ಮಗ ತಂದೆಯನ್ನು ಸಂತೋಷಗೊಳಿಸುತ್ತಾನೆ; ಬುದ್ಧಿಹೀನನು ಹೆತ್ತ ತಾಯಿಯನ್ನು ತಿರಸ್ಕರಿಸುತ್ತಾನೆ. 21 ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುತ್ತಾನೆ; ಬುದ್ಧಿವಂತನು ಸನ್ಮಾರ್ಗದಲ್ಲಿ ಮುಂದುವರಿಯುತ್ತಾನೆ. 22 ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು. 23 ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ. 24 ವಿವೇಕಿಗಳ ಮಾರ್ಗ ಏರಿಸುವುದು ಸಜ್ಜೀವಕ್ಕೆ; ಅದನ್ನು ಕೈಗೊಳ್ಳುವವರು ಇಳಿಯರು ಪಾತಾಳಕ್ಕೆ. 25 ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು. 26 ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ. 27 ಸೂರೆಮಾಡುವವನು ಸ್ವಂತ ಮನೆಗೇ ಕೇಡುಮಾಡುತ್ತಾನೆ; ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ. 28 ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ. 29 ಸರ್ವೇಶ್ವರನು ದುರುಳರಿಗೆ ದೂರ; ನೀತಿವಂತರ ಪ್ರಾರ್ಥನೆಗೆ ಹತ್ತಿರ. 30 ಹಸನ್ಮುಖ ಕಂಡಾಗ ಹೃದಯಕ್ಕೆ ಆನಂದ; ಶುಭಸಮಾಚಾರದಿಂದ ದೇಹಕ್ಕೆ ಉತ್ತೇಜನ. 31 ಹಿತಕರ ಬುದ್ಧಿವಾದಕ್ಕೆ ಕಿವಿಗೊಡುವವನು ಸಜ್ಜನರ ಸತ್ಸಂಘದಲ್ಲಿ ಪಾಲ್ಗೊಳ್ಳುವನು. 32 ಶಿಸ್ತನ್ನು ನಿರಾಕರಿಸುವವನು ತನ್ನನ್ನೇ ತೃಣೀಕರಿಸುತ್ತಾನೆ; ಬುದ್ಧಿವಾದವನ್ನು ಅಂಗೀಕರಿಸುವವನು ಜ್ಞಾನ ಹೊಂದುತ್ತಾನೆ. 33 ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಿಗೆ ಜ್ಞಾನೋದಯ; ಘನತೆಗೌರವಕ್ಕೆ ಮುಂಚೆ ಸವಿನಯ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India