ಜ್ಞಾನೋಕ್ತಿಗಳು 13 - ಕನ್ನಡ ಸತ್ಯವೇದವು C.L. Bible (BSI)1 ಬುದ್ಧಿವಂತ ಮಗ ತಂದೆಯ ಶಿಕ್ಷಣವನ್ನು ಕೇಳುವನು; ಕಿತ್ತಾಡುವ ಮಗ ಗದರಿಕೆಯನ್ನೂ ಕೇಳಲೊಲ್ಲನು. 2 ಸಜ್ಜನರ ಊಟ ಫಲಹಾರ; ವಂಚಕರ ಆಹಾರ ಹಿಂಸಾಚಾರ. 3 ಬಾಯಿಯನ್ನು ಕಾಯುವವನು ಜೀವವನ್ನು ಕಾಯುವನು; ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು. 4 ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ. 5 ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ. 6 ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು. 7 ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವನಾಗಿದ್ದರೂ ಐಶ್ವರ್ಯವಂತನಾಗಿರಬಹುದು. 8 ಹಣವಂತನ ಪ್ರಾಣರಕ್ಷಣೆಗೆ ಅವನ ಹಣವೇ ಈಡು; ಬಡವನಿಗೆ ಈಡಿನ ಬೆದರಿಕೆಯೂ ಇರದು. 9 ಸಜ್ಜನರ ಬೆಳಕು ಪ್ರಜ್ವಲಿಸುವುದು; ದುರ್ಜನರ ದೀಪವು ಆರಿಹೋಗುವುದು. 10 ಗರ್ವದಿಂದ ಹುಟ್ಟುವುದು ಕಲಹಕದನ; ಆಲೋಚನೆಯನ್ನು ಕೇಳುವುದು ಸುಜ್ಞಾನ. 11 ಬಿಟ್ಟಿಯಾಗಿ ಸಿಕ್ಕಿದ ಸಂಪತ್ತು ಬೇಗನೆ ಕರಗುವುದು; ದುಡಿದು ಕೂಡಿಸಿದ ಹಣ ಅಭಿವೃದ್ಧಿಯಾಗುವುದು. 12 ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ. 13 ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು. 14 ಜ್ಞಾನಿಯ ಬೋಧೆ ಜೀವದ ಬುಗ್ಗೆ; ಮಾಡುವುದದು ಮರಣದಿಂದ ಬಿಡುಗಡೆ. 15 ಸುಬುದ್ಧಿ ದಯಾಸ್ಪದ; ದುರಾಚಾರ ವಿನಾಶಕರ. 16 ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ. 17 ಕೆಟ್ಟದೂತನು ಕೇಡಿಗೆ ಸಿಕ್ಕಿಸುವನು; ನಂಬಿಕಸ್ಥ ದೂತನು ಸುಕ್ಷೇಮಕಾರನು. 18 ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ. 19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ. 20 ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು. 21 ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು. 22 ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು. 23 ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು. 24 ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು. 25 ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನ ಹೊಟ್ಟೆ ಹಸಿವಿನಿಂದ ಬಳಲುವುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India