ಜ್ಞಾನೋಕ್ತಿಗಳು 12 - ಕನ್ನಡ ಸತ್ಯವೇದವು C.L. Bible (BSI)1 ಶಿಸ್ತನ್ನು ಹಾರೈಸುವವನು ಶಿಕ್ಷಣ ಪ್ರಿಯನು; ತಿದ್ದುವಿಕೆಯನ್ನು ಹಗೆಮಾಡುವವನು ಪಶುಪ್ರಾಯನು. 2 ಒಳ್ಳೆಯವನು ಸರ್ವೇಶ್ವರನ ದಯೆಯನ್ನು ಗಳಿಸುವನು; ಕೆಟ್ಟವನ ಕುಯುಕ್ತಿ ದೈವಖಂಡನೆಯನ್ನು ಪಡೆಯುವುದು. 3 ದುಷ್ಟತನದಿಂದ ಯಾವನೂ ಸ್ಥಿರತೆಯನ್ನು ಗಳಿಸಿಲ್ಲ; ಶಿಷ್ಟನ ಬೇರನ್ನು ಯಾರೂ ಕದಲಿಸುವಂತಿಲ್ಲ. 4 ಗುಣವಂತ ಸತಿ ಗಂಡನ ತಲೆಗೆ ಕಿರೀಟ; ಲಜ್ಜೆಗೆಟ್ಟ ಹೆಂಡತಿ ಆತನ ಎಲುಬಿಗೆ ಕ್ಷಯ. 5 ಸತ್ಪುರುಷನ ಉದ್ದೇಶ ನ್ಯಾಯಯುತ; ದುಷ್ಟರ ಆಲೋಚನೆ ಮೋಸಭರಿತ. 6 ದುರುಳರ ಮಾತು ಜೀವಕ್ಕೆ ಉರುಳು; ಸಜ್ಜನರ ಮಾತು ಪ್ರಾಣಕ್ಕೆ ನೆರವು. 7 ದುರ್ಜನರು ನೆಲಕ್ಕುರುಳಿ ನಿರ್ಮೂಲರಾಗುವರು; ಸಜ್ಜನರ ತಲೆಮಾರು ಸ್ಥಿರವಾಗಿ ನಿಲ್ಲುವುದು. 8 ಬುದ್ಧಿವಂತನನ್ನು ಅವರ ಬುದ್ಧಿಗೆ ತಕ್ಕಂತೆ ಜನ ಹೊಗಳುವರು; ವಕ್ರಬುದ್ಧಿಯುಳ್ಳವನನ್ನಾದರೊ ಅವರು ತೆಗಳುವರು. 9 ಹೊಟ್ಟೆಗಿಲ್ಲದೆ ಜಟ್ಟಿಯೆನಿಸಿಕೊಳ್ಳುವವನಿಗಿಂತ ಕಷ್ಟದಿಂದ ದುಡಿವ ಸಾಧಾರಣ ಬಂಟನೆ ಲೇಸು. 10 ಒಳ್ಳೆಯವನು ದನಕರುಗಳಿಗೂ ದಯೆ ತೋರುವನು; ಕೆಟ್ಟವನು ತೋರುವ ಕರುಣೆಯು ಕ್ರೂರತನವಾಗುವುದು. 11 ಉತ್ತು ವ್ಯವಸಾಯ ಮಾಡುವವನು ಹೊಟ್ಟೆತುಂಬ ಉಣ್ಣುವನು; ವ್ಯರ್ಥಕಾರ್ಯಗಳಲ್ಲಿ ಆಸಕ್ತಿಯುಳ್ಳವನು ಮತಿಹೀನನು. 12 ಕೆಡುಕರ ಕೋಟೆ ಪುಡಿಪುಡಿಯಾಗುವುದು; ಒಳ್ಳೆಯವರ ಬುಡ ಫಲಬಿಡುವುದು. 13 ಮಾತಿನ ದೋಷದಿಂದ ಕೆಡುಕನು ಬೋನಿಗೆ ಬೀಳುವನು; ನೀತಿವಂತನು ಆಪತ್ತಿನಿಂದ ತಪ್ಪಿಸಿಕೊಳ್ಳುವನು. 14 ಮಾತುಬಲ್ಲವನು ಬದುಕುವನು ಸಂತುಷ್ಟನಾಗಿ; ಕೈಯಿರುವವನು ಬಾಳುವನು ಬಹು ಮಾನಿತನಾಗಿ. 15 ಮೂರ್ಖನ ನಡತೆ ಸ್ವಂತ ಮೆಚ್ಚುಗೆಗೆ; ಬುದ್ಧಿವಂತ ಕಿವಿಗೊಡುವನು ಉಚಿತಾಲೋಚನೆಗೆ. 16 ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು; ಜಾಣನು ನಿಂದೆಯನ್ನು ಮರೆಮಾಚುವನು. 17 ಸತ್ಯವಾದಿ ಪ್ರಾಮಾಣಿಕ ಸಾಕ್ಷಿ; ಸುಳ್ಳು ಸಾಕ್ಷಿ ಕಪಟ ವಾಚಾಳಿ. 18 ಕತ್ತಿ ಇರಿತದಂತೆ ದುಡುಕನ ಮಾತು; ಹುಣ್ಣಿಗೆ ಮದ್ದುಹಾಕಿದಂತೆ ಜ್ಞಾನಿಗಳ ಮಾತು. 19 ಸತ್ಯವಾದಿಯ ಮಾತು ಶಾಶ್ವತ; ಮಿಥ್ಯವಾದಿಯ ಮಾತು ಕ್ಷಣಿಕ. 20 ಕೇಡನ್ನು ಕಲ್ಪಿಸುವವರ ಮನದಲ್ಲಿ ಮೋಸ; ಒಳಿತನ್ನು ಬಯಸುವವರ ಮನದಲ್ಲಿ ಉಲ್ಲಾಸ. 21 ಸಜ್ಜನರಿಗೆ ಸಂಭವಿಸದು ಯಾವ ಕೆಡುಕು; ದುರ್ಜನರಿಗೆ ತುಂಬಿತುಳುಕುವುದು ಕೇಡು. 22 ಮಿಥ್ಯವಾದಿಗಳು ಸರ್ವೇಶ್ವರನಿಗೆ ಹೇಸು; ಸತ್ಯವಾದಿಗಳು ಆತನಿಗೆ ಲೇಸು. 23 ಜಾಣನು ತನ್ನ ಜ್ಞಾನವನ್ನು ಮುಚ್ಚಿಡುವನು; ಮೂಢನು ತನ್ನ ಮೂರ್ಖತನವನ್ನು ಪ್ರಕಟಿಸುವನು. 24 ಚೂಟಿಯಾದವನು ಆಳುವನು ಯಜಮಾನನಾಗಿ; ಮೈಗಳ್ಳನು ಬಾಳುವನು ಗುಲಾಮನಾಗಿ. 25 ಚಿಂತೆ ಮನಸ್ಸನ್ನು ಕುಗ್ಗಿಸುತ್ತದೆ; ಸವಿಮಾತು ಅದನ್ನು ಹಿಗ್ಗಿಸುತ್ತದೆ. 26 ನೀತಿವಂತ ನೆರೆಯವನಿಗೆ ದಾರಿತೋರಿಸುವನು; ಅನೀತಿವಂತನು ಅವನಿಗೆ ದಾರಿ ತಪ್ಪಿಸುವನು. 27 ಮೈಗಳ್ಳನು ಬೇಟೆಯಾಡಿದ್ದನ್ನೂ ಬೇಯಿಸನು; ಚೂಟಿಯಾದವನ ಪಾಲಿಗೆ ಬರುವುದು ಸಂಪತ್ತು. 28 ಸನ್ಮಾರ್ಗದಿಂದ ಜೀವಲಾಭ; ದುರ್ಮಾರ್ಗದಿಂದ ಮರಣ ಪ್ರಾಪ್ತಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India