ಜ್ಞಾನೋಕ್ತಿಗಳು 11 - ಕನ್ನಡ ಸತ್ಯವೇದವು C.L. Bible (BSI)ಕಳ್ಳತಕ್ಕಡಿ 1 ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ. 2 ಅಹಂಕಾರವಿದ್ದಲ್ಲಿ ಅವಮಾನ; ಸ್ವಾರ್ಥ ನಿಗ್ರಹವಿದ್ದಲ್ಲಿ ಸುಜ್ಞಾನ. 3 ಸಜ್ಜನರಿಗೆ ಸರಳತೆ ಮಾರ್ಗದರ್ಶನ, ದುರ್ಜನರಿಗೆ ಅವರ ವಕ್ರತೆ ಸಂಹಾರಕ. 4 ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ. 5 ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ. 6 ಸಜ್ಜನರ ಬಿಡುಗಡೆ ಸದಾಚಾರದಿಂದ; ವಂಚಕರ ಬಂಧನ ದುರಾಶೆಯಿಂದ. 7 ದುರುಳನೊಂದಿಗೆ ಸಾಯುವುದು ಅವನ ನಿರೀಕ್ಷೆ; ಅಳಿವುದು ಸಾಮರ್ಥ್ಯದ ಮೇಲಿಟ್ಟ ಅವನ ನಂಬಿಕೆ. 8 ಸಜ್ಜನನು ಇಕ್ಕಟ್ಟಿನಿಂದ ಪಾರಾಗುವನು; ದುರ್ಜನನು ಅದರೊಳಗೆ ಸಿಕ್ಕಿಬೀಳುವನು. 9 ಅನೀತಿವಂತನು ಮಾತಿನಿಂದ ನೆರೆಯವನನ್ನು ನಾಶಮಾಡುವನು; ನೀತಿವಂತನು ತಿಳುವಳಿಕೆಯಿಂದ ಅವನನ್ನು ಉದ್ಧಾರಮಾಡುವನು. 10 ಸಜ್ಜನರು ಸುಖಿಗಳಾದರೆ ಊರಿಗೆ ಉಲ್ಲಾಸ; ದುರ್ಜನರು ಹಾಳಾದರೆ ಮಾಡುವರು ಜಯಘೋಷ. 11 ಸತ್ಪುರುಷರ ಆಶೀರ್ವಾದದಿಂದ ಪುರೋದ್ಧಾರ; ದುಷ್ಟಜನರ ಕೆಟ್ಟ ಬಾಯಿಂದ ಅದರ ಸಂಹಾರ. 12 ನೆರೆಯವನನ್ನು ತೃಣೀಕರಿಸುವವನು ಬುದ್ಧಿಹೀನ; ವಿವೇಕಿಯು ಅದರ ಬಗ್ಗೆ ತಾಳುವನು ಮೌನ. 13 ಚಾಡಿಕೋರನು ಗುಟ್ಟನ್ನು ರಟ್ಟುಮಾಡುವನು; ನಂಬಿಕಸ್ತನು ಅದನ್ನು ಮುಚ್ಚಿ ಮರೆಮಾಡುವನು. 14 ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು. 15 ಅಪರಿಚಿತನಿಗೆ ಜಾಮೀನು ನಿಂತರೆ ಹಾನಿ; ಜಾಮೀನನ್ನು ತೊರೆದುಬಿಟ್ಟರೆ ನೆಮ್ಮದಿ. 16 ಸದ್ಗುಣಸ್ತ್ರೀ ಕಾಪಾಡಿಕೊಳ್ಳುತ್ತಾಳೆ ಸನ್ಮಾನವನ್ನು; ಬಲವಂತವ್ಯಕ್ತಿ ಕಾಪಾಡಿಕೊಳ್ಳುತ್ತಾನೆ ಆಸ್ತಿಪಾಸ್ತಿಯನ್ನು. 17 ಪರೋಪಕಾರಿ ತನಗೂ ಉಪಕಾರಿ; ಕ್ರೂರಿಯಾದವನು ತನ್ನ ದೇಹಕ್ಕೂ ಕ್ರೂರಿ. 18 ದುರುಳನು ಪಡೆವ ಸಂಬಳ ಜೊಳ್ಳು ಸಂಬಳ; ನೀತಿಯನ್ನು ಬಿತ್ತುವವನು ಪಡೆವನು ಸತ್ಫಲ. 19 ಧರ್ಮನಿರತನಿಗೆ ದೊರಕುವುದು ಜೀವ; ಅಧರ್ಮಾಸಕ್ತನಿಗೆ ಸಿಗುವುದು ಮರಣ. 20 ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು. 21 ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಟ ಸಂತಾನಕ್ಕೆ ಸಿಗುವುದು ಮುಕ್ತಿ. 22 ಲಜ್ಜೆಗೆಟ್ಟು ನಡೆಯುವ ಸೌಂದರ್ಯವತಿ; ಹಂದಿಯ ಮೂತಿಗೆ ಚಿನ್ನದ ಮೂಗುತಿ. 23 ಸಜ್ಜನರ ಕೋರಿಕೆ ಕಲ್ಯಾಣ ಸಾಧಕ; ದುರ್ಜನರ ನಿರೀಕ್ಷೆ ಕೋಪಾಗ್ನಿ ಸಾಧಕ. 24 ಅಳತೆಯಿಲ್ಲದೆ ಕೊಡುವವನು ಧನಾಢ್ಯನಾಗುವನು; ಕೊಡಬೇಕಾದುದನ್ನೂ ಬಿಗಿಹಿಡಿದವನು ಬಡವನಾಗುವನು. 25 ದಾನ ಗುಣವುಳ್ಳವನು ಧನವಂತನಾಗುವನು; ನೀರು ಹಾಯಿಸುವವನಿಗೆ ನೀರು ದೊರಕುವುದು. 26 ಧಾನ್ಯವನ್ನು ಕೊಡದೆ ತುಂಬಿಟ್ಟುಕೊಳ್ಳುವವನ ಮೇಲೆ ಜನರ ಶಾಪ; ಧಾನ್ಯವನ್ನು ಮಾರುವವನ ತಲೆಯ ಮೇಲೆ ಆಶೀರ್ವಾದ. 27 ಒಳಿತಿಗಾಗಿ ಹಂಬಲಿಸುವವನು ಕೃಪಾರ್ಥಿ; ಕೇಡನ್ನು ಹುಡುಕುವವನಿಗೆ ಕೇಡೇ ಗತಿ. 28 ದ್ರವ್ಯವನ್ನು ನಂಬಿದವನು ಉದುರಿಹೋಗುವನು; ದೈವಭಕ್ತನು ಕುಡಿಯಂತೆ ಚಿಗುರುವನು. 29 ಮನೆಯವರನ್ನೆ ಬಾಧಿಸುವವನು ಗಳಿಸುವುದು ಗಾಳಿ; ಬಿದ್ದಿರುವನವನು ಜ್ಞಾನಿಗೆ ಊಳಿಗನಾಗಿ. 30 ಸಜ್ಜನರು ಈವುದು ಜೀವಫಲ; ದುರ್ಜನರು ಪಡೆವುದು ಅಕಾಲಮರಣ. 31 ಸಜ್ಜನರೇ ಜಗದೊಳು ತಮ್ಮ ಕರ್ಮದ ಫಲವನ್ನು ಅನುಭವಿಸುವಲ್ಲಿ; ಹೇಳಬೇಕೆ ಇನ್ನು ದುರ್ಜನರ, ಹಾಗೂ ಪಾಪಿಗಳ ಪರಿಸ್ಥಿತಿ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India