Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 9 - ಕನ್ನಡ ಸತ್ಯವೇದವು C.L. Bible (BSI)


ನೆರೆರಾಷ್ಟ್ರಗಳಿಗೆ ಬರಲಿರುವ ದಂಡನೆ

1 ಹದ್ರಾಕ್ ನಾಡಿಗೂ ದಮಸ್ಕಪಟ್ಟಣಕ್ಕೂ ವಿರುದ್ಧ ಸರ್ವೇಶ್ವರ ನುಡಿದ ದೈವೋಕ್ತಿ: ಸರ್ವೇಶ್ವರಸ್ವಾಮಿ ನರಮಾನವರ ಮೇಲೆ ಕಣ್ಣಿಟ್ಟಿದ್ದಾರೆ. ಹೌದು ಇಸ್ರಯೇಲಿನ ಸಕಲ ಕುಲಗಳ ಮೇಲೆ ಕಣ್ಣಿಟ್ಟಿದ್ದಾರೆ.

2 ಅಂತೆಯೇ ದಮಸ್ಕದ ಪಕ್ಕದಲ್ಲಿರುವ ಹಮಾತಿನ ಮೇಲೆ, ತಾವೇ ಜಾಣರೆಂದು ಕೊಚ್ಚಿಕೊಳ್ಳುತ್ತಿರುವ ಟೈರ್ ಮತ್ತು ಸಿದೋನ್ ಪಟ್ಟಣಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.

3 ಟೈರ್ ಪಟ್ಟಣವು ತನ್ನ ಸುತ್ತಲೂ ಗೋಡೆಯನ್ನು ಕಟ್ಟಿಕೊಂಡಿದೆ. ಬೆಳ್ಳಿಯನ್ನು ಮಣ್ಣುಮಸಿಯಂತೆ, ಬಂಗಾರವನ್ನು ಕಡ್ಡಿಕಸದಂತೆ ರಾಶಿಮಾಡಿಟ್ಟುಕೊಂಡಿದೆ.

4 ಆದರೆ ಸರ್ವೇಶ್ವರ ಅದರ ಆಸ್ತಿಪಾಸ್ತಿಯನ್ನು ಕಿತ್ತುಕೊಂಡು ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು. ಆ ಪಟ್ಟಣವು ಬೆಂಕಿಗೆ ಆಹುತಿಯಾಗುವುದು.

5 ಇದನ್ನು ಕಂಡು ಅಷ್ಕೆಲೋನ್ ಭಯದಿಂದ ನಡುಗುವುದು. ಗಾಜಾ ಪಟ್ಟಣ ಸಂಕಟದಿಂದ ಗೋಳಾಡುವುದು; ಎಕ್ರೋನ್ ನಿರಾಶೆಯಿಂದ ಪ್ರಲಾಪಿಸುವುದು; ಗಾಜಾ ಪಟ್ಟಣಕ್ಕೆ ರಾಜನೇ ಇಲ್ಲದಂತಾಗುವುದು. ಅಷ್ಕೆಲೋನ್ ನಿರ್ಜನ ಪ್ರದೇಶವಾಗುವುದು;

6 ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಮಾಡುವರು. ಸರ್ವೇಶ್ವರ ಇಂತೆನ್ನುತ್ತಾರೆ: “ಫಿಲಿಷ್ಟಿಯದ ಗರ್ವವನ್ನು ಅಡಗಿಸುವೆನು. ಅವರು ಸವಿಯುವ ರಕ್ತಸಿಕ್ತ ಮಾಂಸವನ್ನು ಅವರ ಬಾಯಿಂದ ಕಕ್ಕಿಸುವೆನು.

7 ಅವರು ಕಚ್ಚುವ ನಿಷಿದ್ಧ ಪದಾರ್ಥಗಳನ್ನು ಅವರ ಹಲ್ಲುಗಳಿಂದ ಕಿತ್ತುಹಾಕುವೆನು. ಅವರು ಸಹ ಇಸ್ರಯೇಲಿನ ದೇವರಿಗೆ ಮೀಸಲಾದ ಜನರಾಗುವರು; ಯೆಹೂದ್ಯ ಕುಲಗಳಲ್ಲಿ ಒಂದಾಗುವರು. ಎಕ್ರೋಮಿನವರು ಯೆಬೂಸಿಯರಂತೆ ಆಗುವರು.

8 ಶತ್ರುಗಳು ಅತ್ತ ಕಾಲಿಡದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಿರುವೆನು. ಯಾವ ಬಾಧಕನೂ ನನ್ನ ಜನರ ಮೇಲೆ ಧಾಳಿಮಾಡದಂತೆ ನಾನೇ ಕಣ್ಣಿಟ್ಟು ನೋಡಿಕೊಳ್ಳುವೆನು.”


ಬರಲಿರುವ ಅರಸ

9 ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ, ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ ಜನಗಳೇ, ಇಗೋ, ಬರುತಿಹನು ನಿಮ್ಮ ಅರಸನು ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು.

10 ಕಿತ್ತುಹಾಕುವೆನು ಎಫ್ರಯಿಮಿನ ರಥಬಲವನು ನಿಶ್ಶೇಷಮಾಡುವೆನು ಜೆರುಸಲೇಮಿನ ಅಶ್ವಬಲವನು ಮುರಿಯಲಾಗುವುದು ಯುದ್ಧದ ಬಿಲ್ಲುಗಳನು. ಘೋಷಿಸುವೆನು ಶಾಂತಿಯನು ರಾಷ್ಟ್ರಗಳಿಗೆ ಆತನ ರಾಜ್ಯಭಾರ ಸಮುದ್ರದಿಂದ ಸಮುದ್ರದವರೆಗೆ ಯೂಫ್ರೆಟಿಸ್ ನದಿಯಿಂದ ಭುವಿಯ ಕಟ್ಟಕಡೆಯವರೆಗೆ.


ದೈವಜನರ ಜೀವೋದ್ಧಾರ

11 ರಕ್ತ ಸುರಿಸಿ ನೀವು ನನ್ನೊಡನೆ ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಕರೆತರುವೆನು ನಿಮ್ಮವರನು ಸೆರೆಯಾಳತ್ವದಿಂದ ಮೇಲೆತ್ತುವೆನು ನಿಮ್ಮವರನು ಆ ಸೆರೆಬಾವಿಯಿಂದ.

12 ನಂಬಿಕೆಯಿಂದ ಕಾದಿರುವ ಸೆರೆಯಾಳುಗಳೇ, ಹಿಂದಿರುಗಿರಿ ನಿಮ್ಮ ಸುಭದ್ರ ದುರ್ಗಸ್ಥಾನಕೆ ಇಗೋ, ಈಗಲೂ ಘೋಷಿಸುತ್ತಿರುವೆ: ನಿಮಗಿಮ್ಮಡಿ ಸೌಭಾಗ್ಯ ನೀಡುವೆ.

13 ಬಗ್ಗಿಸಿಕೊಂಡಿರುವೆ ಜುದೇಯ ಎಂಬ ಬಿಲ್ಲನು ಹೂಡಿರುವೆ ಅದರಲಿ ಎಫ್ರಯಿಮೆಂಬ ಬಾಣವನು. ಸಿಯೋನ್, ಎತ್ತಿಕಟ್ಟಿರುವೆ ನಿನ್ನವರನು ಗ್ರೀಕರಿಗಿದಿರಾಗಿ ಮಾಡುವೆ ನಿನ್ನನು ಶೂರನ ಕತ್ತಿಯನ್ನಾಗಿ.

14 ಸ್ವಜನರಿಗೆ ಸರ್ವೇಶ್ವರ ಪ್ರತ್ಯಕ್ಷನಾಗುವನು ಮಿಂಚಿನಂತೆ ಬಿಡುವನು ತನ್ನ ಬಾಣಗಳನು ಮೊಳಗಿಸುವನು ಕಾಳಗದ ತುತೂರಿಯನು ದಕ್ಷಿಣದ ಬಿರುಗಾಳಿಯೊಂದಿಗೆ ಮುನ್ನುಗ್ಗುವನು.

15 ರಕ್ಷಿಸುವನು ಸೇನಾಧೀಶ್ವರ ಸರ್ವೇಶ್ವರ ತನ್ನ ಜನರನು ನಸುಕಿ ನಾಶಮಾಡುವರವರು ಕವಣೆಗಾರ ಶತ್ರುಗಳನು. ಭೋರ್ಗರೆಯುವರು ಕುಡಿದು ಅಮಲೇರಿದವರಂತೆ ಇರುವರು ತುಂಬಿ ತುಳುಕುವ ಬೋಗುಣಿಗಳಂತೆ ರಕ್ತತೋಯ್ದ ವೇದಿಯ ಮೂಲೆಮೂಲೆಗಳಂತೆ.

16 ಸ್ವಜನರನು ದೇವ ಸರ್ವೇಶ್ವರ ಕಾಪಾಡುವನು ಮೇಷಪಾಲನಂತೆ ನಾಡಿನೊಳು ಥಳಥಳಿಸುವರವರು ಕಿರೀಟದ ರತ್ನಗಳಂತೆ.

17 ಆಹಾ! ಎಷ್ಟು ಸುಂದರ, ಎಷ್ಟು ಮನೋಹರ ಆ ನಾಡಿನ ದೃಶ್ಯ! ಪುಷ್ಟಿಗೊಳಿಸುವುವು ಯುವಕಯುವತಿಯರನು ದ್ರಾಕ್ಷೆ, ದವಸಧಾನ್ಯ!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು