Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 8 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮನ್ನು ಪುನಃನಿರ್ಮಿಸಲು ಪ್ರತಿಜ್ಞೆ

1 ಸೇನಾಧೀಶ್ವರ ಸರ್ವೇಶ್ವರ ಜೆಕರ್ಯನಿಗೆ ಪುನಃ ಕೊಟ್ಟ ಸಂದೇಶವಿದು:

2 “ಸಿಯೋನಿನ ವಿಷಯದಲ್ಲಿ ನನಗೆ ತುಂಬಾ ಅಭಿಮಾನವಿದೆ. ಅದರ ಶತ್ರುಗಳ ವಿಷಯದಲ್ಲಿ ಅಧಿಕ ರೋಷವಿದೆ.”

3 ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸಮಾಡುವೆನು. ಆಗ ಜೆರುಸಲೇಮ್ ‘ನಿಷ್ಠಾವಂತ ನಗರ’ ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರನ ಪರ್ವತ, ಪವಿತ್ರ ಪರ್ವತ ಎಂಬ ಹೆಸರು ಬರುವುದು.”

4 ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ಮುದುಕರು, ಮುದುಕಿಯರು ಮತ್ತೆ ಜೆರುಸಲೇಮಿನ ಚೌಕಗಳಲ್ಲಿ ಕುಳಿತುಕೊಳ್ಳುವರು. ವೃದ್ಧಾಪ್ಯದ ಪ್ರಯುಕ್ತ ಒಬ್ಬೊಬ್ಬರ ಕೈಯಲ್ಲಿ ಊರುಗೋಲು ಇರುವುದು.

5 ಪಟ್ಟಣದ ಹಾದಿಬೀದಿಗಳಲ್ಲಿ ಮಕ್ಕಳು ತುಂಬಿಕೊಂಡಿರುವರು.”

6 ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ಅಳಿದುಳಿದಿರುವ ಜನರಿಗೆ ಇಂಥ ಪರಿಸ್ಥಿತಿ ಅತಿಶಯವಾಗಿ ಕಾಣಬಹುದು. ಆದರೆ ನನಗೆ ಅದೇನೂ ಅತಿಶಯವಲ್ಲ.” ಇದು ಸರ್ವೇಶ್ವರನ ನುಡಿ.

7 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇಗೋ, ನಾನು ನನ್ನ ಜನರನ್ನು ಪೂರ್ವಪಶ್ಚಿಮ ನಾಡುಗಳಿಂದ ಬಿಡುಗಡೆಮಾಡಿ, ಇಲ್ಲಿಗೆ ಬರಮಾಡುವೆನು.

8 ಅವರು ಜೆರುಸಲೇಮಿನಲ್ಲೇ ವಾಸವಾಗಿರುವರು. ನಾನು ಅವರಿಗೆ ದೇವರಾಗಿರುವೆನು; ಅವರು ನನಗೆ ಸತ್ಸಂಬಂಧವುಳ್ಳ ಸದ್ಧರ್ಮದ ಪ್ರಜೆಗಳಾಗಿರುವರು.”

9 ಸೇನಾಧೀಶ್ವರ ಸರ್ವೇಶ್ವರ ಹೀಗೆಂದಿದ್ದಾರೆ: “ನಿಮ್ಮ ಕೈ ಮುಂದಾಗಲಿ. ಈಗ ನೀವು ಕೇಳುತ್ತಿರುವ ಮಾತುಗಳು ಮಹಾದೇವಾಲಯಕ್ಕೆ ಅಸ್ತಿಭಾರವನ್ನು ಹಾಕಿದ ಕಾಲದಲ್ಲಿ ಪ್ರವಾದಿಗಳು ಆಡಿದ ಮಾತುಗಳೇ.

10 ಆ ಕಾಲಕ್ಕೆ ಹಿಂದೆ ಆಳುಗಳಿಗೆ ಕೂಲಿ ಕೊಡುವುದಕ್ಕಾಗಲೀ ಎತ್ತುಗಾಡಿಗಳಿಗೆ ಬಾಡಿಗೆ ಕೊಡುವುದಕ್ಕಾಗಲೀ ಯಾರಿಗೂ ಶಕ್ತಿ ಇರಲಿಲ್ಲ. ನಾಡಿನಿಂದ ಹೋಗುವವರಿಗಾಗಲೀ ನಾಡಿನೊಳಗೆ ಪ್ರವೇಶಿಸುವವರಿಗಾಗಲಿ ಶತ್ರುಗಳ ಕಾಟದಿಂದ ರಕ್ಷಣೆ ಇರಲಿಲ್ಲ. ಒಬ್ಬರಿಗೊಬ್ಬರು ಹಗೆಗಳಾಗಿರುವಂತೆ ಮಾಡಿದ್ದೆ.

11 ಇನ್ನು ಮೇಲಾದರೋ, ಅಳಿದುಳಿದ ಜನರಿಗೆ ಹಾಗೆ ಮಾಡೆನು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

12 ಜನರು ನೆಮ್ಮದಿಯಿಂದ ಬಿತ್ತನೆ ಮಾಡುವರು. ದ್ರಾಕ್ಷಾಲತೆ ಹಣ್ಣುಬಿಡುವುದು. ಭೂಮಿಯಲ್ಲಿ ಬೆಳೆಯಾಗುವುದು. ಆಕಾಶ ಮಳೆಯನ್ನು ಸುರಿಸುವುದು. ಅಳಿದುಳಿದ ಜನರಿಗೆ ಈ ಸೌಭಾಗ್ಯ ಲಭಿಸುವಂತೆ ಮಾಡುವೆನು.

13 ಜುದೇಯದ ಕುಲಸ್ಥರೇ, ಇಸ್ರಯೇಲ್ ವಂಶಜರೇ, ರಾಷ್ಟ್ರಗಳಲ್ಲಿ ನಿಮ್ಮ ಹೆಸರು ಶಾಪಕ್ಕೆ ಅಡ್ಡ ಹೆಸರಾಗಿತ್ತು. ಆದರೆ ನಾನು ನಿಮ್ಮನ್ನು ಉದ್ಧರಿಸಿ ನಿಮ್ಮ ಹೆಸರು ಶುಭಸೂಚ್ಯವಾಗುವಂತೆ ಮಾಡುವೆನು. ಹೆದರಬೇಡಿ; ನಿಮ್ಮ ಕೈ ಮುಂದಾಗಲಿ.”

14 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನಿಮ್ಮ ಪೂರ್ವಜರ ನಿಮಿತ್ತ ನಾನು ಕೋಪಗೊಂಡಾಗ, ನಿಮಗೆ ಕೇಡುಮಾಡಬೇಕೆಂದು ನಿಷ್ಕರುಣಿಯಾಗಿ ಸಂಕಲ್ಪಿಸಿದೆ.

15 ಆದರೆ ಈಗ ಜೆರುಸಲೇಮಿನವರಿಗೂ ಜುದೇಯದ ಜನರಿಗೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿದ್ದೇನೆ. ಆದುದರಿಂದ ಹೆದರಬೇಡಿ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

16 “ನೀವು ಮಾಡಬೇಕಾದುದು ಏನೆಂದರೆ: ಪ್ರತಿಯೊಬ್ಬನು ತನ್ನ ನೆರೆಯವನೊಡನೆ ಸತ್ಯವನ್ನೇ ಆಡಲಿ. ನ್ಯಾಯಾಲಯಗಳಲ್ಲಿ ನಿಮ್ಮ ತೀರ್ಪು ನ್ಯಾಯಸಮ್ಮತವಾಗಿರಲಿ, ಶಾಂತಿಯ ಸಾಧನ ಆಗಿರಲಿ.

17 ನಿಮ್ಮಲ್ಲಿ ಯಾರೂ ನೆರೆಯವನಿಗೆ ಕೇಡು ಬಗೆಯದಿರಲಿ. ಸುಳ್ಳುಸಾಕ್ಷ್ಯಕ್ಕೆ ಎಂದೂ ಸಂತೋಷಿಸಬೇಡಿ. ಇದೆಲ್ಲ ನನಗೆ ಅಸಹ್ಯ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

18 ಸೇನಾಧೀಶ್ವರ ಸರ್ವೇಶ್ವರ ನನಗೆ ಕೊಟ್ಟ ಸಂದೇಶವೇನೆಂದರೆ:

19 “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳುಗಳ ಉಪವಾಸ ಇವು ಯೆಹೂದ್ಯ ವಂಶಕ್ಕೆ ವಿಶೇಷ ಹಬ್ಬದ ದಿನಗಳಾಗಿ ಮಾರ್ಪಟ್ಟು, ಜನರು ಹರ್ಷಿಸಿ ಆನಂದಿಸುವರು. ಇಂತಿರಲು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸಿರಿ.”

20 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇನ್ನು ಮುಂದೆ ಜನಾಂಗಗಳೂ ಹಲವು ನಗರ ನಿವಾಸಿಗಳೂ ಜೆರುಸಲೇಮಿಗೆ ಬರುವರು.

21 ‘ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು, ಅವರ ಆಶೀರ್ವಾದವನ್ನು ಬೇಡಲು ದೇವಾಲಯಕ್ಕೆ ಹೋಗುತ್ತಿದ್ದೇವೆ. ನಮ್ಮೊಡನೆ ಬನ್ನಿ, ಹೋಗೋಣ’ ಎಂದು ಒಂದು ಊರಿನವರು ಮತ್ತೊಂದೂರಿನವರಿಗೆ ಹೇಳುವರು.

22 “ನಾನಾದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು.

23 ಆ ದಿನದಲ್ಲಿ ವಿವಿಧ ಭಾಷೆಗಳನ್ನಾಡುವ ರಾಷ್ಟ್ರಗಳಿಂದ ಹತ್ತು ಹತ್ತು ಮಂದಿ ಬಂದು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವೂ ನಿಮ್ಮೊಂದಿಗೆ ಬರುತ್ತೇವೆ. ಏಕೆಂದರೆ ದೇವರು ನಿಮ್ಮೊಡನೆ ಇದ್ದಾರೆ ಎಂಬ ಸುದ್ದಿಯನ್ನು ಕೇಳಿದ್ದೇವೆ’ ಎಂದು ಹೇಳುವರು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು