Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 6 - ಕನ್ನಡ ಸತ್ಯವೇದವು C.L. Bible (BSI)


ನಾಲ್ಕು ರಥಗಳ ದರ್ಶನ

1 ನನಗೆ ಇನ್ನೊಂದು ದರ್ಶನವಾಯಿತು: ಇಗೋ, ಎರಡು ಬೆಟ್ಟಗಳ ನಡುವೆ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅವು ಕಂಚಿನ ಬೆಟ್ಟಗಳಾಗಿದ್ದವು.

2 ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು,

3 ಮೂರನೆಯ ರಥಕ್ಕೆ ಬಿಳೀ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.

4 ಆಗ, “ಸ್ವಾಮೀ, ಇದೆಲ್ಲ ಏನು?” ಎಂದು ಸೂತ್ರಧಾರಿಯಾದ ದೂತನನ್ನು ಪ್ರಶ್ನಿಸಿದೆ.

5 ಅದಕ್ಕೆ ದೂತನು, “ಇವು ಆಕಾಶದ ನಾಲ್ಕು ಮಾರುತಗಳು; ಭೂಲೋಕದೊಡೆಯನ ಸಾನ್ನಿಧ್ಯದಿಂದ ಇದೀಗಲೆ ಹೊರಟುಬಂದಿವೆ,” ಎಂದನು.

6 ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳ ರಥ ಅದನ್ನು ಹಿಂಬಾಲಿಸಿ ಪಶ್ಚಿಮಕ್ಕೆ ಹೋಯಿತು. ಮಚ್ಚೆ ಕುದುರೆಗಳ ರಥ ದಕ್ಷಿಣ ದೇಶಕ್ಕೆ ತೆರಳಿತು.

7 “ಕೆಂಪು ಕುದುರೆಗಳು ಲೋಕದಲ್ಲೆಲ್ಲ ಗಸ್ತು ತಿರುಗಿ,” ಎಂದು ಅಪ್ಪಣೆಮಾಡಲು, ಅವು ಅಂತೆಯೇ ಮಾಡಿದವು.

8 ಆಮೇಲೆ ದೂತನು ನನಗೆ, “ಉತ್ತರ ದೇಶಕ್ಕೆ ಹೊರಟ ಕುದುರೆಗಳ ರಥ ಸರ್ವೇಶ್ವರಸ್ವಾಮಿಯ ಕೋಪವನ್ನು ಶಮನಗೊಳಿಸಿದೆ,” ಎಂದು ಕೂಗಿ ಹೇಳಿದನು.


ಯೆಹೋಶುವನ ಕಿರೀಟಧಾರಣೆ

9 ಸರ್ವೇಶ್ವರ ನನಗಿತ್ತ ಆದೇಶವಿದು:

10 “ಈ ದಿನವೇ ಜೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗು, ಬಾಬಿಲೋನಿಗೆ ಸೆರೆಹೋಗಿ ಮರಳಿ ಬಂದಿಳಿದಿರುವ ಹೆಲ್ದಾಯ, ತೊಬೀಯ, ಯೆದಾಯ ಎಂಬವರಿಂದ ಕಾಣಿಕೆಯನ್ನು ಸ್ವೀಕರಿಸು.

11 ಅವರಿಂದ ಪಡೆದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಒಂದು ಕಿರೀಟವನ್ನು ಮಾಡಿಸು. ಅದನ್ನು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನ ತಲೆಗೆ ತೊಡಿಸು.

12 ಮತ್ತು ಅವನಿಗೆ ಹೀಗೆಂದು ಹೇಳು: ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಮೊಳಕೆಯೆಂಬ ಪುರುಷನು ಮೂಡುವನು! ಆತನು ಇದ್ದ ಸ್ಥಳದಲ್ಲಿಯೇ ಅರಳಿ ಸರ್ವೇಶ್ವರನ ಆಲಯವನ್ನು ಕಟ್ಟಿಸುವನು.

13 ಹೌದು, ಅವನೇ ಸರ್ವೇಶ್ವರನ ಆಲಯವನ್ನು ಕಟ್ಟಿಸಿದ ಮೇಲೆ, ರಾಜವೈಭವವನ್ನು ತಾಳಿ ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಯಾಜಕನೊಬ್ಬನು ಅವನ ಆಸ್ಥಾನದಲ್ಲಿರುವನು. ಅವರಿಬ್ಬರೂ ಶಾಂತಿಸಮಾಧಾನದಿಂದಿರುವರು.

14 ಅವರ ಕಿರೀಟವು ಹೇಲಮ್, ತೊಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ - ಇವರ ಜ್ಞಾಪಕಾರ್ಥವಾಗಿ ಆಲಯದಲ್ಲೇ ಇರುವುದು.”

15 ದೂರದಲ್ಲಿ ವಾಸಿಸುವ ಜನರು ಅಲ್ಲಿಗೆ ಬಂದು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ನೆರವಾಗುವರು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯೇ ಎಂಬುದು ನಿಮಗೆ ಮನದಟ್ಟಾಗುವುದು. ನಿಮ್ಮ ದೇವರಾದ ಆ ಸ್ವಾಮಿಯ ಮಾತನ್ನು ನೀವು ಮನಃಪೂರ್ವಕವಾಗಿ ಅನುಸರಿಸಿದರೆ ಇದೆಲ್ಲವೂ ಸರಿಯಾಗಿ ನೆರವೇರುವುದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು