Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 5 - ಕನ್ನಡ ಸತ್ಯವೇದವು C.L. Bible (BSI)


ಹಾರುವ ಸುಳಿಯ ದರ್ಶನ

1 ಪುನಃ ನಾನು ಕಣ್ಣೆತ್ತಿ ನೋಡಲು, ಇಗೋ, ಹಾರುತ್ತಿರುವ ಒಂದು ಸುರುಳಿ ಕಾಣಿಸಿತು.

2 ದೂತನು ನನ್ನನ್ನು, “ನಿನಗೆ ಏನು ಕಾಣಿಸುತ್ತಿದೆ?” ಎಂದು ಕೇಳಿದನು. ಅದಕ್ಕೆ ನಾನು “ಹಾರುತ್ತಿರುವ ಪತ್ರದ ಸುರುಳಿ ಕಾಣಿಸುತ್ತಿದೆ. ಅದರ ಉದ್ದ ಒಂಬತ್ತು ಮೀಟರ್, ಅಗಲ ನಾಲ್ಕುವರೆ ಮೀಟರ್,” ಎಂದು ಉತ್ತರಕೊಟ್ಟೆ.

3 ಆಗ ಅವನು ನನಗೆ “ನಾಡಿನ ಮೇಲೆ ಬಂದೆರಗಲಿರುವ ಶಾಪ ಅದರಲ್ಲಿ ಲಿಖಿತ ಆಗಿದೆ. ಒಂದು ಕಡೆ ಬರೆದಿರುವಂತೆ, ಪ್ರತಿಯೊಬ್ಬ ಕಳ್ಳನನ್ನು ನಾಡಿನಿಂದ ಹೊರದೂಡಲಾಗುವುದು. ಮತ್ತೊಂದು ಕಡೆ ಬರೆದಿರುವಂತೆ, ಸುಳ್ಳಾಣೆ ಇಡುವ ಪ್ರತಿಯೊಬ್ಬನನ್ನೂ ನಾಡಿನಿಂದ ಹೊರದೂಡಲಾಗುವುದು.

4 ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ನಾನು ಶಾಪವನ್ನು ಕಳುಹಿಸುತ್ತೇನೆ. ಅದು ಕಳ್ಳನ ಮನೆಯನ್ನೂ ನನ್ನ ಹೆಸರೆತ್ತಿ ಸುಳ್ಳಾಣೆಯಿಡುವವನ ಮನೆಯನ್ನೂ ಹೊಕ್ಕು, ಅಲ್ಲಿ ತಂಗಿದ್ದು ಅದನ್ನು ಕಲ್ಲುಮರ ಸಹಿತ ಸಂಪೂರ್ಣವಾಗಿ ಭಸ್ಮಮಾಡುವುದು,” ಎಂದನು.


ಕೊಳಗದಲ್ಲಿದ್ದ ಮಹಿಳೆಯ ದರ್ಶನ

5 ಅನಂತರ ಸೂತ್ರಧಾರಿಯಾದ ದೂತನು ನನ್ನ ಬಳಿ ಬಂದು: “ಮತ್ತೊಂದು ಏನೋ ಬರುತ್ತಿದೆ, ನೋಡು,” ಎಂದನು.

6 “ಏನದು?” ಎಂದು ನಾನು ವಿಚಾರಿಸಲು, ಅವನು, “ನಿನಗೆ ಕಾಣಿಸುತ್ತಿರುವ ಆ ವಸ್ತು ಒಂದು ಕೊಳಗದ ಪಾತ್ರೆ,” ಎಂದನು. ಅಲ್ಲದೆ, “ಅದು ಇಡೀ ನಾಡಿನ ಅಧರ್ಮದ ಪ್ರತೀಕ,” ಎಂದನು.

7 ಆಗ ಕೊಳಗದ ತಟ್ಟೆಯಾಕಾರದ ಮುಚ್ಚಳವು ತೆಗೆಯಲಾಯಿತು. ಇಗೋ, ಅದರಲ್ಲಿ ಮಹಿಳೆಯೊಬ್ಬಳು ಕುಳಿತಿದ್ದಳು.

8 ಸೂತ್ರಧಾರಿಯಾದ ದೂತನು: “ಇವಳೇ ಪಾಪದ ಪ್ರತೀಕ,” ಎಂದು ಹೇಳಿ, ಅವಳನ್ನು ಕೊಳಗದೊಳಗೆ ಅದುಮಿ, ಭಾರವಾದ ಆ ಸೀಸದ ಮುಚ್ಚಳವನ್ನು ತಟ್ಟನೆ ಕೊಳಗದ ಬಾಯಿಗಿಟ್ಟು ಮುಚ್ಚಿಬಿಟ್ಟನು.

9 ಪುನಃ ನಾನು ಕಣ್ಣೆತ್ತಿ ನೋಡಲು, ಇಗೋ, ಕೊಕ್ಕರೆಯ ರೆಕ್ಕೆಗಳಂತಿರುವ ರಭಸವಾದ ರೆಕ್ಕೆಗಳುಳ್ಳ ಇಬ್ಬರು ಮಹಿಳೆಯರು ಬರುತ್ತಿರುವುದನ್ನು ಕಂಡೆನು. ಅವರು ಕೊಳಗದ ಪಾತ್ರೆಯನ್ನು ಎತ್ತಿಕೊಂಡು ಹಾರಿಹೋದರು.

10 “ಅವರು ಕೊಳಗವನ್ನು ಎಲ್ಲಿಗೆ ಎತ್ತಿಕೊಂಡು ಹೋಗುತ್ತಿದ್ದಾರೆ?” ಎಂದು ನಾನು ಕೇಳಿದೆ.

11 ಅದಕ್ಕೆ ಸೂತ್ರಧಾರಿಯಾದ ದೂತನು, “ಬಾಬಿಲೋನಿಯಾ ದೇಶಕ್ಕೆ: ಅಲ್ಲಿ ಅವಳಿಗೆ ಗುಡಿಕಟ್ಟುವುದಕ್ಕಾಗಿ ಹೋಗುತ್ತಿದ್ದಾರೆ. ಅದು ಸಿದ್ಧವಾದಾಗ ಅಲ್ಲಿನ ಪೀಠದ ಮೇಲೆ ಆ ಕೊಳಗವನ್ನು ಪ್ರತಿಷ್ಠಾಪಿಸಲಾಗುವುದು,” ಎಂದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು