Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 4 - ಕನ್ನಡ ಸತ್ಯವೇದವು C.L. Bible (BSI)


ದೀಪಸ್ತಂಭದ ದರ್ಶನ

1 ಅನಂತರ ಸೂತ್ರಧಾರಿಯಾದ ದೂತನು ಮತ್ತೆ ಬಂದು ನಿದ್ರೆ ಹತ್ತಿದವನಂತಿದ್ದ ನನ್ನನ್ನು ಎಚ್ಚರಗೊಳಿಸಿದನು.

2 “ಏನನ್ನು ನೋಡುತ್ತಿರುವೆ?” ಎಂದು ಅವನು ನನ್ನನ್ನು ಕೇಳಿದಾಗ ನಾನು, “ಇಗೋ, ಏಳು ದೀಪಗಳುಳ್ಳ ಸುವರ್ಣಮಯ ದೀಪಸ್ತಂಭವೊಂದನ್ನು ನೋಡುತ್ತಿದ್ದೇನೆ. ಅದರ ಮೇಲ್ಗಡೆ ಎಣ್ಣೆಯ ಪಾತ್ರೆ ಇದೆ. ಅದರ ಮೇಲೆ ದೀಪಗಳಿಗೆ ಏಳು ನಾಳಗಳಿವೆ.

3 ದೀಪಸ್ತಂಭದ ಪಕ್ಕದಲ್ಲಿ ಬಲಗಡೆ ಒಂದು, ಎಡಗಡೆ ಇನ್ನೊಂದು - ಹೀಗೆ ಎರಡು ಎಣ್ಣೆಯ ಮರಗಳಿವೆ,” ಎಂದನು.

4 ಸೂತ್ರಧಾರಿ ಆದ ಆ ದೂತನನ್ನು, “ಸ್ವಾಮೀ, ಇದು ಏನನ್ನು ಸೂಚಿಸುತ್ತದೆ?” ಎಂದು ಕೇಳಿದೆ.

5 ಅದಕ್ಕೆ ಆ ದೂತನು, “ಇದು ಏನೆಂದು ನಿನಗೆ ತಿಳಿಯುವುದಿಲ್ಲವೋ? ಎಂದು ಪ್ರಶ್ನಿಸಿದನು. ಅದಕ್ಕೆ ನಾನು, “ಇಲ್ಲ, ಸ್ವಾಮೀ” ಎಂದು ಉತ್ತರಕೊಟ್ಟೆ.

10 ಆಗ ದೂತನು, “ಈ ಸ್ತಂಭದಲ್ಲಿರುವ ಏಳು ದೀಪಗಳು ಭೂಲೋಕದ ಎಲ್ಲಾ ಭಾಗಗಳನ್ನು ವೀಕ್ಷಿಸುವ ಸರ್ವೇಶ್ವರಸ್ವಾಮಿಯ ಏಳು ಕಣ್ಣುಗಳನ್ನು ಸೂಚಿಸುತ್ತವೆ,” ಎಂದನು.

11 ಪುನಃ ನಾನು ದೇವದೂತನನ್ನು, “ದೀಪಸ್ತಂಭದ ಎಡಬಲಗಳಲ್ಲಿರುವ ಎಣ್ಣೆಮರಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆ.

12 (ಮತ್ತೆ ಅವನನ್ನು - “ತಮ್ಮೊಳಗಿಂದ ಚಿನ್ನದಂಥ ಎಣ್ಣೆಯನ್ನು ಪಾತ್ರೆಯಲ್ಲಿ ತುಂಬಿಸುವ ಎರಡು ಬಂಗಾರದ ನಾಳಗಳಿವೆಯಲ್ಲಾ; ಆ ನಾಳಗಳ ಬಾಯಿಗೆ ಸೇರಿರುವ ಎರಡು ಎಣ್ಣೆಕಾಯಿಗುತ್ತಿಗಳು ಏನು?” ಎಂದು ಕೇಳಿದೆ.)

13 ಅದಕ್ಕೆ ಆ ದೂತನು: “ಅವು ಏನೆಂದು ನಿನಗೆ ತಿಳಿಯುವುದಿಲ್ಲವೋ” ಎಂದು ಕೇಳಿದಾಗ ನಾನು: “ಇಲ್ಲ, ಸ್ವಾಮೀ,” ಎಂದೆ.

14 ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷಿಕ್ತರಾದ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ,” ಎಂದನು.


ಜೆರುಬ್ಬಾಬೆಲನಿಗೆ ದೇವರಿತ್ತ ವಾಗ್ದಾನ

6 ದೂತನು ನನಗೆ ಹೀಗೆಂದು ಹೇಳಿದನು: “ಜೆರುಬ್ಬಾಬೆಲನಿಗೆ ಈ ಸಂದೇಶವನ್ನು ಕೊಡು - ನಿನಗೆ ಜಯ ದೊರಕುವುದು. ನಿನ್ನ ಶಕ್ತಿಸಾಮರ್ಥ್ಯದಿಂದಲ್ಲ, ಸೇನಾಬಲದಿಂದಲೂ ಅಲ್ಲ; ನನ್ನ ಆತ್ಮಶಕ್ತಿಯಿಂದ, ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

7 ಅಡ್ಡಿ ಅಡಚಣೆಗಳು ಬೆಟ್ಟದಂತಿದ್ದರೂ ನೀನು ದೇವಾಲಯವನ್ನು ಕಟ್ಟುವೆ. ಅಂತ್ಯದಲ್ಲಿ ಕಲಶವನ್ನು ಸ್ಥಾಪಿಸುವಾಗ ಜನರು ‘ಎಷ್ಟು ರಮ್ಯ! ಎಷ್ಟು ಸುಂದರ!’ ಎಂದು ಉದ್ಗರಿಸುವರು.”

8 ಸರ್ವೇಶ್ವರ ನನಗೆ ಇನ್ನೊಂದು ಸಂದೇಶವಿತ್ತರು: “ಜೆರುಬ್ಬಾಬೆಲನು ಮಹಾದೇವಾಲಯದ ಕಟ್ಟಡಕ್ಕೆ ಅಸ್ತಿಭಾರವನ್ನು ಹಾಕಿದ್ದಾನೆ. ಆ ಕಟ್ಟಡವನ್ನು ಅವನೇ ಪೂರೈಸುವನು. ನಿನ್ನನ್ನು ಜನರ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರ ಎಂದು ಆಗ ಸರ್ವರಿಗೆ ಗೊತ್ತಾಗುವುದು.

9 ಪ್ರಾರಂಭದಲ್ಲಿ ಚಿಕ್ಕಕಾರ್ಯಗಳನ್ನು ನೋಡಿ ಪರಿಹಾಸ್ಯಮಾಡಿದವರು ಆಗ ಜೆರುಬ್ಬಾಬೆಲನ ಕೈಯಲ್ಲಿ ಅಳತೆನೂಲಿನ ಗುಂಡನ್ನು ಕಂಡು ಸಂತೋಷಪಡುವರು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು