ಜೆಕರ್ಯ 3 - ಕನ್ನಡ ಸತ್ಯವೇದವು C.L. Bible (BSI)ಪ್ರಧಾನ ಯಾಜಕನ ದರ್ಶನ 1 ಮತ್ತೊಂದು ದರ್ಶನದಲ್ಲಿ ಪ್ರಧಾನ ಯಾಜಕನಾದ ಯೆಹೋಶುವನು ದೂತನ ಮುಂದೆ ನಿಂತಿರುವುದನ್ನು ಸರ್ವೇಶ್ವರ ನನಗೆ ತೋರಿಸಿದರು. ಯೆಹೋಶುವನಿಗೆ ಪ್ರತಿವಾದಿಯಾಗಿ ಸೈತಾನನು ಅವನ ಪಕ್ಕದಲ್ಲಿ ನಿಂತಿದ್ದ. 2 ಆಗ ಸರ್ವೇಶ್ವರಸ್ವಾಮಿಯ ದೂತನು ಸೈತಾನನಿಗೆ: “ಸೈತಾನನೇ, ಸರ್ವೇಶ್ವರ ನಿನ್ನನ್ನು ಖಂಡಿಸಲಿ, ಜೆರುಸಲೇಮನ್ನು ಆರಿಸಿಕೊಂಡ ಸರ್ವೇಶ್ವರ ನಿನ್ನನ್ನು ಖಂಡಿಸಲಿ, ಈತ ಒಲೆಯಂತೆ ಹಿರಿದ ಬೆಂಕಿಕೊಳ್ಳಿ” ಎಂದನು. 3 ದೇವದೂತನ ಮುಂದೆ ನಿಂತಿದ್ದ ಯೆಹೋಶುವನು ಮಲಿನವಾದ ಬಟ್ಟೆಯನ್ನು ಧರಿಸಿದ್ದನು. 4 ತನ್ನ ಮುಂದೆ ನಿಂತಿದ್ದ ಸೇವಕರಿಗೆ ಆ ದೂತನು, “ಈತನ ಮಲಿನವಾದ ಬಟ್ಟೆಗಳನ್ನು ತೆಗೆದುಬಿಡಿ,” ಎಂದನು. ಅನಂತರ ಯೆಹೋಶುವನಿಗೆ, “ನಿನ್ನ ದೋಷವನ್ನು ತೊಲಗಿಸಿದ್ದೇನೆ. ಶ್ರೇಷ್ಠವಾದ ಬಟ್ಟೆಗಳನ್ನು ನಿನಗೆ ತೊಡಿಸುವೆನು,” ಎಂದನು. 5 “ಇವನ ತಲೆಗೆ ಶುಭ್ರವಾದ ಪೇಟವನ್ನು ಸುತ್ತಿರಿ,” ಎಂದು ಆ ದೂತನು ಅಪ್ಪಣೆಮಾಡಲು, ಸೇವಕರು ಯೆಹೋಶುವನ ತಲೆಗೆ ಪೇಟವನ್ನು ಸುತ್ತಿ ಶುಭ್ರ ವಸ್ತ್ರಗಳನ್ನು ತೊಡಿಸಿದರು. ದೇವದೂತನು ಅಲ್ಲಿಯೇ ನಿಂತಿದ್ದನು. 6 ಬಳಿಕ ದೇವದೂತನು ಯೆಹೋಶುವನಿಗೆ ಈ ಆಶ್ವಾಸನೆಯನ್ನು ಕೊಟ್ಟನು: 7 “ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ನೀನು ನನ್ನ ಮಾರ್ಗದಲ್ಲಿ ನಡೆದು, ನಾನು ನಿನಗೆ ವಹಿಸಿದ ಕಾರ್ಯವನ್ನು ನೆರವೇರಿಸಿದರೆ, ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ. ಅದರ ವ್ಯಾಪ್ತಿಯಲ್ಲಿ ಉಳ್ಳ ಎಲ್ಲದಕ್ಕೂ ವ್ಯವಸ್ಥಾಪಕನಾಗುವೆ. ಈ ಸನ್ನಿಧಾನದ ದೂತರ ಮಧ್ಯೆ ಬಂದುಹೋಗುವ ಹಕ್ಕನ್ನು ನಿನಗೆ ಕೊಡುವೆನು. 8 ಪ್ರಧಾನ ಯಾಜಕನಾದ ಯೆಹೋಶುವನೇ, ನೀನೂ ಮತ್ತು ನಿನ್ನ ಜೊತೆಯಲ್ಲಿ ಉಪಸ್ಥಿತರಾದ ಸಹಯಾಜಕರೂ, ಕೇಳಲಿ: ನೀವು ಶುಭದಿನಗಳ ಮುಂಗುರುತು. ‘ಮೊಳಕೆ’ ಎಂಬಸೇವಕನೊಬ್ಬನು ಕಾಣಿಸಿಕೊಳ್ಳುವಂತೆ ಮಾಡುವೆನು. 9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿ. ಆ ಒಂದೇ ಕಲ್ಲಿನಲ್ಲಿ ಏಳು ಮುಖಗಳು ಇರುವ ಒಂದು ಕೆತ್ತನೆಯನ್ನು ಕೆತ್ತುವೆನು. ಒಂದೇ ದಿನದಲ್ಲಿ ಈ ನಾಡಿನ ಪಾಪವನ್ನು ತೊಡೆದುಹಾಕುವೆನು. 10 ಆ ದಿನದಂದು ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆಗಳ ಹಾಗೂ ಅಂಜೂರದ ಗಿಡಗಳ ನೆರಳಿನಲ್ಲಿ ಸಮಾಧಾನದಿಂದ ವಿಶ್ರಮಿಸಲು ಕರೆಯುವಿರಿ. ಇದು ಸೇನಾಧಿಶ್ವರ ಸರ್ವೇಶ್ವರಸ್ವಾಮಿಯ ನುಡಿ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India