Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 2 - ಕನ್ನಡ ಸತ್ಯವೇದವು C.L. Bible (BSI)


ಅಳತೆನೂಲಿನ ದರ್ಶನ

1 ನನಗೆ ಮತ್ತೊಂದು ದರ್ಶನವಾಯಿತು. ಕೈಯಲ್ಲಿ ಅಳತೆನೂಲನ್ನು ಹಿಡಿದುಕೊಂಡಿದ್ದ ಒಬ್ಬನು ಕಾಣಿಸಿಕೊಂಡ.

2 “ಎಲ್ಲಿಗೆ ಹೋಗುತ್ತಿರುವೆ?” ಎಂದು ನಾನು ಅವನನ್ನು ಕೇಳಿದಾಗ, ಅವನು: “ಜೆರುಸಲೇಮಿನ ಉದ್ದ - ಅಗಲ ಎಷ್ಟಿದೆಯೆಂದು ಅಳೆಯಲು ಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟನು.

3 ಆಗ ಸೂತ್ರಧಾರಿಯಾದ ದೂತನು ಮುಂದೆ ಬರುತ್ತಿರಲು, ಇನ್ನೊಬ್ಬ ದೂತನು ಆತನನ್ನು ಎದುರಗೊಂಡು,

4 “ಅಳೆಯಲು ಹೋಗುತ್ತಿರುವ ಆ ಯುವಕನಿಗೆ ಓಡಿಹೋಗಿ ಈ ಮಾತನ್ನು ತಿಳಿಸು: ‘ಜೆರುಸಲೇಮಿನಲ್ಲಿ ಜನರ ಮತ್ತು ದನಕರುಗಳ ಸಂಖ್ಯೆ ಅಪಾರವಾಗುವುದು. ಅದು ಪೌಳಿಗೋಡೆಗಳಿಲ್ಲದ ಊರುಕೇರಿಗಳಂತೆ ಹರಡಿಕೊಳ್ಳುವುದು.

5 ನಾನೇ ಅದರ ಸುತ್ತಮುತ್ತಲು ಅಗ್ನಿ ಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ,’ ಎಂದ.”


ಸೆರೆಹೋದವರಿಗೆ ಮರಳಿಬರಲು ಕರೆ

6-7 ಸರ್ವೇಶ್ವರ ತಮ್ಮ ಜನರಿಗೆ ಇಂತೆನ್ನುತ್ತಾರೆ: “ಚತುರ್ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದವನು ನಾನೇ. ಆದರೆ ಈಗ ಎಚ್ಚೆತ್ತುಕೊಳ್ಳಿ, ಹೊರನಾಡುಗಳಿಂದ ಓಡಿಬನ್ನಿ, ಇದು ಸರ್ವೇಶ್ವರನ ನುಡಿ. ಬಾಬಿಲೋನಿಗೆ ಸೆರೆಹೋದ ಸಿಯೋನಿನವರೇ, ಅಲ್ಲಿಂದ ತಪ್ಪಿಸಿಕೊಂಡು ಬನ್ನಿ.

8 ತಮ್ಮ ಮಹಿಮೆಯನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನು ಸೂರೆಮಾಡಿದ ರಾಷ್ಟ್ರಗಳಿಗೆ ಕೊಡುವ ಎಚ್ಚರಿಕೆ ಇದು:

9 ‘ನಿಮ್ಮನ್ನು ಮುಟ್ಟುವವರು ನನ್ನ ಕಣ್ಮಣಿಯನ್ನೇ ಮುಟ್ಟಿದಂತೆ! ಇಗೋ, ನಾನು ಅವರ ಮೇಲೆ ಕೈಯೆತ್ತುವೆನು. ಅವರು ತಮ್ಮ ದಾಸರ ಕೈಯಿಂದಲೇ ಸೂರೆಯಾಗುವರು. ನನ್ನನ್ನು ಕಳುಹಿಸಿದವರು ಸೇನಾಧೀಶ್ವರ ಸರ್ವೇಶ್ವರ ಎಂಬುದು ಆಗ ನಿಮಗೆ ಗೊತ್ತಾಗುವುದು’.”

10 ಸರ್ವೇಶ್ವರ ಇಂತೆನ್ನುತ್ತಾರೆ: “ಎಲೈ ಸಿಯೋನ್ ನಗರವೇ, ಸಂತೋಷಪಡು, ಜಯಕಾರ ಮಾಡು; ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು!”

11 ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು.

12 ಪವಿತ್ರಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು.

13 ಸರ್ವೇಶ್ವರ ತಮ್ಮ ಪರಿಶುದ್ಧಾಲಯದಿಂದ ಹೊರಬರುತ್ತಿದ್ದಾರೆ. ನರಮಾನವರೇ, ಅವರ ಶ್ರೀಸನ್ನಿಧಿಯಲ್ಲಿ ನೀವೆಲ್ಲರು ಮೌನತಾಳಿರಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು