Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 13 - ಕನ್ನಡ ಸತ್ಯವೇದವು C.L. Bible (BSI)

1 ಸೇನಾಧೀಶ್ವರ ಸರ್ವೇಶ್ವರ ಹೀಗೆ ಹೇಳುತ್ತಾರೆ: “ಆ ದಿನದಂದು ದಾವೀದ ವಂಶದವರಿಗೆ ಮತ್ತು ಜೆರುಸಲೇಮಿನವರಿಗೆ ಪಾಪದ ಅಶುದ್ಧತೆಯನ್ನು ಪರಿಹರಿಸಬಲ್ಲ ಒಂದು ಬುಗ್ಗೆ ಕಾಣಿಸಿಕೊಳ್ಳುವುದು.

2 ಅಂದು ನಾಡಿನಲ್ಲಿ ವಿಗ್ರಹಗಳು ಹೆಸರಿಲ್ಲದಂತೆ ಮಾಡುವೆನು; ಅಷ್ಟೇ ಅಲ್ಲ, ಅವುಗಳನ್ನು ಯಾರೂ ನೆನಸಿಕೊಳ್ಳದಂತೆ ಮಾಡುವೆನು; ಅಲ್ಲದೆ ಪ್ರವಾದಿಯೆನಿಸಿಕೊಳ್ಳುವವರನ್ನೂ ಅಶುದ್ಧ ಆತ್ಮವನ್ನೂ ನಾಡಿನಿಂದ ತೊಲಗಿಸಿಬಿಡುವೆನು.

3 ಯಾವನಾದರೂ ಪ್ರವಾದನೆ ಮಾಡಲು ಯತ್ನಿಸಿದರೆ, ಅವನ ತಾಯಿತಂದೆಗಳೇ, “ಇವನು ಸರ್ವೇಶ್ವರಸ್ವಾಮಿಯ ಹೆಸರೆತ್ತಿ ಸುಳ್ಳಾಡುವುದರಿಂದ ಅವನು ಬದುಕಬಾರದು,” ಎಂದು ಹೇಳುವರು. ಅಷ್ಟೇ ಅಲ್ಲ, ಅವನು ಮಾಡಿದ ಪ್ರವಾದನೆಯ ನಿಮಿತ್ತ ಅವರೇ ಅವನನ್ನು ತಿವಿದು ಕೊಂದುಹಾಕುವರು.

4 ಆ ದಿನದಲ್ಲಿ ಯಾವ ಪ್ರವಾದಿಯೂ ತನಗಾಗಿರಬಹುದಾದ ದರ್ಶನಗಳನ್ನು ಪ್ರಕಟಿಸಲು ಹೆಮ್ಮೆಪಡುವುದಿಲ್ಲ. ಪ್ರವಾದಿಯಂತೆ ನಟಿಸುವುದಿಲ್ಲ. ಪ್ರವಾದಿಯ ವೇಷವನ್ನು ಧರಿಸುವುದಿಲ್ಲ.

5 ಬದಲಿಗೆ, ತಾನು ಪ್ರವಾದಿಯಲ್ಲ, ಹೊಲದಲ್ಲಿ ಕೆಲಸಮಾಡುವವನು, ಚಿಕ್ಕಂದಿನಿಂದ ನಾನು ಕೂಲಿಯಾಳು ಎಂದುಕೊಳ್ಳುವನು.

6 ‘ನಿನ್ನ ಮೈಮೇಲಿನ ಗಾಯಗಳು ಹೇಗಾದವು?’ ಎಂದು ಯಾರಾದರೂ ಕೇಳಿದರೆ, ‘ಇವು ಗೆಳೆಯನ ಮನೆಯಲ್ಲಾದ ಗಾಯಗಳು’ ಎಂದು ಉತ್ತರಕೊಡುವನು.”


ಕುರಿಗಾಹಿಯ ಮರ್ದನ - ಕುರಿಗಳ ಪಲಾಯನ

7 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಕುರಿಗಾಹಿಗೆ ವಿರುದ್ಧವಾಗಿ, ನನ್ನಾಸಂಗಡಿಗನಿಗೆದುರಾಗಿ, ಓ ಖಡ್ಗವೇ, ಎಚ್ಚರಗೊಳ್ಳು; ಕೊಲ್ಲು ಕುರಿಗಾಹಿಯನು. ಆಗ ಚದರುವುವು ಕುರಿಗಳು, ಕೈಮಾಡಲಿರುವೆ ಮರಿಗಳ ಮೇಲೂ.

8 ಹತರಾಗುವರು ನಾಡಿನ ಮೂರರಲ್ಲೆರಡು ಭಾಗದವರು, ಮೂರನೆಯ ಭಾಗದವರು ಉಳಿಯುವರಲ್ಲಿ, ಸರ್ವೇಶ್ವರಸ್ವಾಮಿಯ ನುಡಿಯಿದು.

9 ಹಾಕುವೆನಾ ಮೂರನೇ ಭಾಗದವರನ್ನು ಬೆಂಕಿಗೆ, ಶೋಧಿಸುವೆನು ಅವರನ್ನು ಬೆಳ್ಳಿಯ ಹಾಗೆ. ಶುದ್ಧೀಕರಿಸುವೆನು ಬಂಗಾರದ ಹಾಗೆ. ಕಿವಿಗೊಡುವೆ ನನ್ನ ಹೆಸರೆತ್ತಿ ಪ್ರಾರ್ಥಿಸುವವರಿಗೆ. ಹೇಳುವೆನು, ‘ಇವರೇ ನನ್ನ ಪ್ರಜೆಯೆಂದು. ಹೇಳುವರವರು ‘ಸರ್ವೇಶ್ವರನೇ ನಮ್ಮ ದೇವ’ ಎಂದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು