Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 12 - ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲಿನ ವಿಷಯವಾಗಿ ಸರ್ವೇಶ್ವರಸ್ವಾಮಿ ನುಡಿದ ದೈವೋಕ್ತಿ: ಆಕಾಶಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿಭಾರವನ್ನು ಹಾಕಿ, ಮಾನವನ ಜೀವಾತ್ಮವನ್ನು ಸೃಷ್ಟಿಸುವ ಸರ್ವೇಶ್ವರ ಇಂತೆನ್ನುತ್ತಾರೆ:

2 “ನಾನು ಜೆರುಸಲೇಮನ್ನು ಮದ್ಯದ ಬುಡ್ಡಿಯನ್ನಾಗಿ ಮಾಡುವೆನು. ಅದರ ಸುತ್ತಮುತ್ತಲಿರುವ ರಾಷ್ಟ್ರಗಳು ಆ ಬುಡ್ಡಿಯಿಂದ ಕುಡಿದು ಮತ್ತರಾಗಿ, ಅತ್ತಿತ್ತ ಓಲಾಡುವರು. ಜೆರುಸಲೇಮಿಗೆ ಅವರು ಮುತ್ತಿಗೆ ಹಾಕುವಾಗ ಜುದೇಯವೆಲ್ಲವೂ ಇಕ್ಕಟ್ಟಿಗೆ ಒಳಗಾಗುವುದು.

3 ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿಹಾಕಲು ಕೂಡಿಬರುವುವು.

4 ಆಗ ಅವರ ಕುದುರೆಗಳೆಲ್ಲ ತಬ್ಬಿಬ್ಬಾಗುವಂತೆ ಮಾಡುವೆನು. ರಾಹುತರನ್ನು ದಿಗ್ಭ್ರಮೆಗೊಳಿಸುವೆನು. ಜುದೇಯ ಮನೆತನವನ್ನು ಕಟಾಕ್ಷಿಸಿ, ಇತರ ರಾಷ್ಟ್ರಗಳ ಕುದುರೆಗಳನ್ನೆಲ್ಲಾ ಕುರುಡಾಗಿಸುವೆನು.

5 ಆಗ ಜುದೇಯದ ನಾಯಕರೆಲ್ಲ ತಮ್ಮ ತಮ್ಮೊಳಗೇ: ‘ಜೆರುಸಲೇಮಿನ ನಿವಾಸಿಗಳ ಶಕ್ತಿಸಾಮರ್ಥ್ಯ ಸೇನಾಧೀಶ್ವರ ಸರ್ವೇಶ್ವರನಾದ ದೇವರೇ’ ಎಂದುಕೊಳ್ಳುವರು.

6 “ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.

7 “ಸರ್ವೇಶ್ವರನಾದ ನಾನು ಜುದೇಯದ ಸೈನ್ಯಗಳು ಮೊದಲು ಜಯಗಳಿಸುವಂತೆ ಮಾಡುವೆನು. ಆಗ ದಾವೀದ ವಂಶದವರ ಹಾಗೂ ಜೆರುಸಲೇಮಿನವರ ಘನತೆ ಗೌರವ ಜುದೇಯದವರ ಘನತೆ ಗೌರವವನ್ನು ಮೀರದು.

8 ಅಂದು, ಸರ್ವೇಶ್ವರ ಜೆರುಸಲೇಮಿನ ನಿವಾಸಿಗಳನ್ನು ಕೋಟೆಯಂತೆ ಕಾಪಾಡುವರು. ಈ ಕಾರಣ, ಅವರಲ್ಲಿ ದುರ್ಬಲನು ದಾವೀದನಂತೆ ಬಲಾಢ್ಯನಾಗುವನು. ದಾವೀದನವಂಶ ದೇವದೂತರಂತೆ, ಹೌದು, ದೇವರಂತೆ, ಅವರಿಗೆ ಮುಂದಾಳಾಗುವುದು.

9 ಆ ದಿನದಂದು ಜೆರುಸಲೇಮಿನ ಮೇಲೆ ಬೀಳುವ ರಾಷ್ಟ್ರಗಳೆಲ್ಲವನ್ನು ನಾನೇ ಧ್ವಂಸಮಾಡುವೆನು.

10 “ದಾವೀದನ ವಂಶಜರಲ್ಲೂ ಜೆರುಸಲೇಮಿನ ನಿವಾಸಿಗಳ ಮನದಲ್ಲೂ ಕರುಣಿಸುವ ಹಾಗೂ ಪ್ರಾರ್ಥಿಸುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನೇ ಅವರು ಆಗ ದಿಟ್ಟಿಸಿ ನೋಡುವರು. ಏಕೈಕ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು. ಕಾಲವಾದ ಜ್ಯೇಷ್ಠ ಪುತ್ರನಿಗಾಗಿ ಎಂಬಂತೆ ಅತ್ತು ಪ್ರಲಾಪಿಸುವರು.

11 ಮೆಗಿದ್ದೋವಿನ ಕಣಿವೆಯಲ್ಲಿ ಆದಂತೆ, ಹದಾಧ್ - ರೀಮೋನ್‍ನಲ್ಲಿ ನಡೆದಂತೆ ಜೆರುಸಲೇಮಿನಲ್ಲಿ ಆ ದಿನದಂದು ದೊಡ್ಡ ಗೋಳಾಟವಾಗುವುದು.

12 ನಾಡೆಲ್ಲ ಗೋಳಾಡುವುದು, ಒಂದೊಂದು ಕುಟುಂಬವೂ ಪ್ರತ್ಯೇಕವಾಗಿ ಗೋಳಾಡುವುದು. “ದಾವೀದ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ನಾತಾನ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;

13 ಲೇವಿ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಶಿಮ್ಮಿಯ ಸಂತಾನದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;

14 ಮಿಕ್ಕ ಕುಟುಂಬಗಳೆಲ್ಲ ಬೇರೆಯಾಗಿ, ಅವುಗಳ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಹೀಗೆ ಎಲ್ಲರು ಗೋಳಾಡುವರು ಬೇರೆಬೇರೆಯಾಗಿ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು