ಮುನ್ನುಡಿ
ಪ್ರವಾದಿ ಜೆಫನ್ಯ ಬೋಧನೆಮಾಡಿದ್ದು ಕ್ರಿ. ಪೂ. ಏಳನೇ ಶತಮಾನದ ಕೊನೆಯ ಭಾಗದಲ್ಲಿ. ಇಸ್ರಯೇಲರ ಅರಸನಾದ ಯೋಷೀಯ ಎಂಬವನು ಕ್ರಿ. ಪೂ. 620ರಲ್ಲಿ ಕೆಲವು ಧಾರ್ಮಿಕ ಸುಧಾರಣೆಗಳನ್ನು ಮಾಡಿದನು. ಬಹುಶಃ ಇದಕ್ಕೆ ಒಂದು ದಶಕದ ಹಿಂದೆಯೇ ಜೆಫನ್ಯ ತನ್ನ ಬೋಧನಾ ಸೇವೆಯನ್ನು ಮಾಡಿದ್ದಿರಬೇಕು. ಸರ್ವ ವಿನಾಶದ ದಿನ ಸನ್ನಿಹಿತವಾಗಿದೆ; ಅನ್ಯದೇವರುಗಳ ಆರಾಧನೆಯ ನಿಮಿತ್ತ ಜುದೇಯನಾಡಿಗೆ ತಕ್ಕ ದಂಡನೆ ಕಾದಿದೆ. ಇತರ ರಾಷ್ಟ್ರಗಳು ಈ ದಂಡನೆಯಿಂದ ಪಾರಾಗುವಂತಿಲ್ಲ. ಜೆರುಸಲೇಮ್ ನಗರ ಪೂರ್ಣವಾಗಿ ಅಳಿದುಹೋದರೂ ಅದರ ಪುನರುದ್ಧಾರದ ದಿನ ಬಂದೇ ಬರುವುದು. ದೀನದಲಿತರು, ನೀತಿವಂತರು ಮಾತ್ರ ಬದುಕುವರು - ಇವೇ ಮುಂತಾದ ವಿಷಯಗಳನ್ನು ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯಗಳು ಇತರ ಪ್ರವಾದನಾ ಗ್ರಂಥಗಳಲ್ಲೂ ಅಡಗಿವೆ.
ಪರಿವಿಡಿ
ದೇವರ ದಂಡನೆಯ ದಿನ 1:1—2:3
ನೆರೆರಾಷ್ಟ್ರಗಳ ಅಳಿವು 2:4-15
ಜೆರುಸಲೇಮಿನ ವಿನಾಶ, ಪುನರ್‍ಸ್ಥಾಪನೆ 3:1-20