Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಚೆಫನ್ಯ 3 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನ ಪಾಪ ಮತ್ತು ಪುನರುದ್ಧಾರ

1 ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ಧಿಕ್ಕಾರ!

2 ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ, ತನ್ನ ದೇವರ ಸನ್ನಿಧಿಗೆ ಬರಲಿಲ್ಲ.

3 ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.

4 ಅದರ ಪ್ರವಾದಿಗಳು ಬಡಾಯಿಕೊಚ್ಚುವವರು, ವಿಶ್ವಾಸದ್ರೋಹಿಗಳು. ಅದರ ಯಾಜಕರು ಪವಿತ್ರವಾದುದನ್ನು ಹೊಲೆಗೆಡಿಸುವಂಥವರು, ಧರ್ಮವಿಧಿಗಳನ್ನು ಭಂಗಪಡಿಸುವಂಥವರು.

5 ಆದರೆ ಅದರ ಮಧ್ಯೆಯಿರುವ ಸರ್ವೇಶ್ವರ ನ್ಯಾಯಸ್ವರೂಪಿ, ಎಂದಿಗೂ ಅನ್ಯಾಯ ಮಾಡುವುದಿಲ್ಲ. ದಿನದಿನವೂ ತಪ್ಪದೆ ನ್ಯಾಯ ದೊರಕಿಸುತ್ತಾರೆ. ಅವರಿಗೆ ಗುಟ್ಟಾಗಿರುವುದು ಯಾವುದೂ ಇಲ್ಲ. ಅನ್ಯಾಯಮಾಡುವವನಿಗಾದರೋ ನಾಚಿಕೆ ಎಂಬುದೇ ಇಲ್ಲ.

6 ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ರಾಷ್ಟ್ರಗಳನ್ನು ಧ್ವಂಸಮಾಡಿದ್ದೇನೆ. ಅವುಗಳ ಕೋಟೆಕೊತ್ತಲಗಳು ಪಾಳುಬಿದ್ದಿವೆ. ಅವುಗಳ ಹಾದಿಬೀದಿಗಳನ್ನು ನಿರ್ಜನವಾಗಿಸಿದ್ದೇನೆ. ಯಾರೂ ಅವುಗಳಲ್ಲಿ ಹಾದುಹೋಗುವಂತಿಲ್ಲ. ಅವರ ಪಟ್ಟಣಗಳು ನಾಶವಾಗಿವೆ; ನಿರ್ನಿವಾಸವಾಗಿ ಶೂನ್ಯವಾಗಿವೆ.

7 ಇದರಿಂದಲಾದರೂ ಜೆರುಸಲೇಮ್ ನಗರ ನನಗೆ ಭಯಪಡುವುದು, ನಾನು ಕಲಿಸಿದ ಪಾಠವನ್ನು ಎಂದಿಗೂ ಮರೆಯದು’ ಎಂದುಕೊಂಡೆ. ಆದರೆ ಅದರ ನಿವಾಸಿಗಳು ತಮ್ಮ ನಡತೆಯನ್ನು ಕೆಡಿಸಿಕೊಳ್ಳಲು ಮತ್ತಷ್ಟು ಕಾತರರಾದರು.”

8 ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಸ್ವಲ್ಪತಾಳಿರಿ, ನಾನು ತಪ್ಪನ್ನು ನಿಮಗೆ ತೋರಿಸುವ ದಿನಕ್ಕಾಗಿ ಕಾದಿರಿ. ರಾಷ್ಟ್ರಗಳನ್ನು ಒಂದಾಗಿಸಲು, ರಾಜ್ಯಗಳನ್ನು ಒಂದುಗೂಡಿಸಲು ನಿರ್ಧರಿಸಿದ್ದೇನೆ; ಹೀಗೆ ಅವುಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನು ಸುರಿಸಲು ತೀರ್ಮಾನಿಸಿದ್ದೇನೆ. ಲೋಕವೆಲ್ಲವು ನನ್ನ ಕೋಪಾಗ್ನಿಯಿಂದ ಧ್ವಂಸವಾಗುವುದು.

9 “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು.

10 ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.

11 ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕೃತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ.

12 ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು.

13 ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.”


ಆನಂದ ಗೀತೆ

14 ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ.

15 ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ.

16 ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: “ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು.”

17 ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ.

18 ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.

19 ಆ ದಿನದಲಿ ಇಂತೆನ್ನುವನು: “ದಂಡಿಸುವೆನು ನಿನ್ನನು ಬಾಧಿಸಿದವರನು ಉದ್ಧರಿಸುವೆನು ನಿನ್ನಲ್ಲಿ ಕುಂಟುವವರನು ಒಂದುಗೂಡಿಸುವೆನು ಚದರಿಹೋದವರನು ಬರಮಾಡುವೆನು ಅವಮಾನಿತರಿಗೆ ಸನ್ಮಾನವನು ಗಿಟ್ಟಿಸುವೆನು ನಿಮಗೆ ಜಗದಲ್ಲೆಲ್ಲ ಕೀರ್ತಿಯನು.

20 ಕರೆದು ತರುವೆನು ನಿಮ್ಮನ್ನು ಆ ಕಾಲದೊಳು ಮರಳಿಸುವೆನು ಮನೆಗೆ ಆ ದಿನದೊಳು. ಹಿಂದಿನ ಸಮೃದ್ಧಿಯನ್ನು ಬರಮಾಡುವೆನು ನಿನ್ನ ಕಣ್ಮುಂದೆ ದೊರಕುವುದಾಗ ನಿನಗೆ ಸ್ತುತಿಕೀರ್ತಿ ಜನಾಂಗಗಳ ಮುಂದೆ.” - ಸರ್ವೇಶ್ವರಸ್ವಾಮಿಯ ನುಡಿಯಿದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು