ಚೆಫನ್ಯ 2 - ಕನ್ನಡ ಸತ್ಯವೇದವು C.L. Bible (BSI)ಪಶ್ಚಾತ್ತಾಪಕ್ಕೆ ಕರೆ 1 ನಾಚಿಕೆ ಇಲ್ಲದ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ, 2 ಕಾಲವು ಹೊಟ್ಟಿನಂತೆ ಹಾರಿಹೋಗುವ ಮೊದಲು, ಸರ್ವೇಶ್ವರಸ್ವಾಮಿಯ ಉಗ್ರಕೋಪವು ನಿಮ್ಮ ಮೇಲೆ ಎರಗುವ ಮುಂಚೆ, ಅವರ ಸಿಟ್ಟಿನ ದಿನ ನಿಮ್ಮನ್ನು ಮುಟ್ಟುವುದಕ್ಕೆ ಮುನ್ನ ಸೇರ ಬನ್ನಿ, ಕೂಡಿ ಬನ್ನಿ. 3 ನಾಡಿನ ದೀನ ಜನರೇ, ಸರ್ವೇಶ್ವರನ ಆಜ್ಞೆಯನ್ನು ಕೈಗೊಂಡು ನಡೆಯುವವರೇ, ನೀವೆಲ್ಲರೂ ಸ್ವಾಮಿಯ ಕಡೆಗೆ ತಿರುಗಿಕೊಳ್ಳಿ. ಒಳ್ಳೆಯದನ್ನು ಮಾಡಿರಿ, ಸ್ವಾಮಿಯ ಮುಂದೆ ನಿಮ್ಮನ್ನೇ ತಗ್ಗಿಸಿಕೊಳ್ಳಿ; ಸರ್ವೇಶ್ವರಸ್ವಾಮಿಯ ಆ ಸಿಟ್ಟಿನ ದಿನದಂದು ಬಹುಶಃ ನೀವು ಸುರಕ್ಷಿತರಾಗುವಿರಿ. ಇಸ್ರಯೇಲಿನ ಸುತ್ತಮುತ್ತಲಿನ ರಾಷ್ಟ್ರಗಳ ವಿನಾಶ 4 ಗಾಜಾಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು; ಅಷ್ಡೋದಿನ ನಿವಾಸಿಗಳನ್ನು ನಡುಮಧ್ಯಾಹ್ನದಲ್ಲೆ ಅಟ್ಟಿಸಿಬಿಡಲಾಗುವುದು; ಎಕ್ರೋನಿನ ಜನರನ್ನು ನಿರ್ಮೂಲಮಾಡಲಾಗುವುದು. 5 ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನರೇ, ನಿಮಗೆ ಧಿಕ್ಕಾರ! ಫಿಲಿಷ್ಟಿಯರ ನಾಡಾದ ಕಾನಾನೇ, ನಿನಗೆ ಧಿಕ್ಕಾರ! ಸರ್ವೇಶ್ವರನ ನ್ಯಾಯತೀರ್ಪು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ಯಾರೂ ಉಳಿಯದಂತೆ ಅಳಿಸಿಬಿಡುವರು. 6 ಸಮುದ್ರತೀರದಲ್ಲಿರುವ ಆ ಪ್ರಾಂತ್ಯವು ಹುಲ್ಲುಗಾವಲಾಗುವುದು; ಕುರುಬರ ಗುಡಿಸಲಾಗುವುದು, ಕುರಿಗಳ ದೊಡ್ಡಿಯಾಗುವುದು. 7 ಆ ಕರಾವಳಿಯು ಅಳಿದುಳಿದ ಯೆಹೂದ್ಯರ ಪಾಲಾಗುವುದು; ಅವರ ದನಕುರಿಗಳಿಗೆ ಹುಲ್ಲುಗಾವಲಾಗುವುದು; ಅಷ್ಕೆಲೋನಿನ ಮನೆಗಳು ಅವರಿಗೆ ವಿಶ್ರಾಂತಿ ನಿಲಯಗಳಾಗುವುವು. ದೇವರಾದ ಸರ್ವೇಶ್ವರ ಅವರನ್ನು ಪರಿಪಾಲಿಸುವರು ಮತ್ತು ಅವರನ್ನು ಮರಳಿ ಏಳಿಗೆಗೆ ತರುವರು. 8 “ಮೋವಾಬ್ಯರು ಮತ್ತು ಅಮ್ಮೋನ್ಯರು ಅಹಂಕಾರದಿಂದ ನನ್ನ ಜನರ ವಿರುದ್ಧ ಆಡುವ ಚುಚ್ಚುಮಾತುಗಳು ನನ್ನ ಕಿವಿಗೆ ಬಿದ್ದಿವೆ. ನನ್ನ ಜನರ ನಾಡನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಅವರು ಕೊಚ್ಚಿಕೊಳ್ಳುತ್ತಿದ್ದಾರೆ. 9 ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.” 10 ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಜನರನ್ನು ದೂಷಿಸಿ ದರ್ಪದ ಮಾತುಗಳನ್ನು ಆಡಿದ್ದರಿಂದಲೆ ಈ ಪ್ರಾಂತ್ಯಗಳ ಗರ್ವಿಷ್ಠ ಜನರಿಗೆ ಶಿಕ್ಷೆಯಾಗುವುದು. 11 ಸರ್ವೇಶ್ವರ ಅವರಿಗೆ ಭಯಭೀತಿ ಉಂಟುಮಾಡುವರು; ಅವರ ಭೂಮಿಯಲ್ಲಿನ ದೇವತೆಗಳನ್ನೆಲ್ಲಾ ಕ್ಷಯಿಸಿಬಿಡುವರು; ಅದಾದ ನಂತರ ಪ್ರತಿಯೊಂದು ರಾಷ್ಟ್ರದವರು ತಮ್ಮ ತಮ್ಮ ನಾಡಿನಲ್ಲೇ ಸರ್ವೇಶ್ವರಸ್ವಾಮಿಯನ್ನು ಆರಾಧಿಸುವರು. 12 ಸುಡಾನಿನ ಜನರೇ, ನೀವೂ ಸಹ ಕತ್ತಿಗೆ ತುತ್ತಾಗುವಿರಿ. 13 ಅಸ್ಸೀರಿಯವನ್ನು ಸರ್ವೇಶ್ವರ ತಮ್ಮ ಭುಜಬಲದಿಂದ ಧ್ವಂಸಮಾಡುವರು; ನಿನೆವೆ ಪಟ್ಟಣವನ್ನು ಹಾಳುಬಿದ್ದ ಅವಶೇಷವಾಗಿ, ನೀರಿಲ್ಲದ ಮರುಭೂಮಿಯಾಗಿ ಮಾಡುವರು. 14 ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು; ಅದರ ಹಾಳುಬಿದ್ದ ಮನೆಗಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಯಿಂದ ಕೇಳಿಬರುವುದು; ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು; ದೇವದಾರು ಮರದ ತೊಲೆಗಳು ಕಳಚಿಬೀಳುವುವು. 15 “ಇರುವ ನಗರ ನಾನೇ, ನನ್ನ ಹೊರತು ಇನ್ನಾರೂ ಇಲ್ಲ” ಎಂದು ಕೊಚ್ಚಿಕೊಂಡು ಯಾವ ಚಿಂತೆಯೂ ಇಲ್ಲದೆ, ನೆಮ್ಮದಿಯಿಂದ ಇದ್ದ ನಿನೆವೆಯ ಗತಿ ನೋಡಿ, ಎಂಥ ಹಾಳುಬಿದ್ದ ಊರಾಗಿದೆ! ಕಾಡುಮೃಗಗಳ ಬೀಡಾಗಿದೆ! ಹಾದುಹೋಗುವವರೆಲ್ಲ ಸಿಳ್ಳುಹಾಕಿ ಕೈತೋರಿಸಿ ಪರಿಹಾಸ್ಯಮಾಡುವಷ್ಟು ಕೀಳಾಗಿದೆ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India