ಚೆಫನ್ಯ 1 - ಕನ್ನಡ ಸತ್ಯವೇದವು C.L. Bible (BSI)1 ಅಮೋನನ ಮಗನು ಹಾಗೂ ಜುದೇಯದ ಅರಸನು ಆದ ಯೋಷೀಯನ ಕಾಲದಲ್ಲಿ ಸರ್ವೇಶ್ವರ ಜೆಫನ್ಯನಿಗೆ ಕೊಟ್ಟ ಸಂದೇಶವಿದು: (ಜೆಫನ್ಯನು ಕೂಷಿಯ ಮಗನು; ಕೂಷಿಯನು ಗೆದಲ್ಯನಿಗೆ, ಗೆದಲ್ಯನು ಅಮರ್ಯನಿಗೆ, ಅಮರ್ಯನು ಹಿಜ್ಕೀಯನಿಗೆ ಹುಟ್ಟಿದವರು). ಜೆರುಸಲೇಮಿಗೆ ನ್ಯಾಯತೀರ್ಪು 2 ಸರ್ವೇಶ್ವರ ಇಂತೆಂದರು - “ನಾನು ಭೂಮಂಡಲದ ಮೇಲೆ ಏನೂ ಇಲ್ಲದಂತೆ ಸಮಸ್ತವನ್ನು ಅಳಿಸಿಬಿಡುವೆನು. 3 ಮನುಷ್ಯರು, ಮೃಗಗಳು, ಆಕಾಶದ ಪಕ್ಷಿಗಳು, ಸಮುದ್ರದ ಮೀನುಗಳು - ಇವೆಲ್ಲವನ್ನು ನಾಶಪಡಿಸುವೆನು. ದುರ್ಜನರು ಬಿದ್ದು ಸಾಯುವಂತೆ ಮಾಡುವೆನು; ನರಸಂತಾನವನ್ನು ಧರೆಯ ಮೇಲಿಂದ ಕಿತ್ತುಹಾಕುವೆನು.” ಇದು ಸರ್ವೇಶ್ವರಸ್ವಾಮಿಯ ನುಡಿ. 4 “ಜುದೇಯ ನಾಡನ್ನೂ ಜೆರುಸಲೇಮಿನ ನಿವಾಸಿಗಳೆಲ್ಲರನ್ನೂ ಕೈಯೆತ್ತಿ ಸದೆಬಡಿಯುವೆನು; ಬಾಳನ ಪೂಜೆಪುರಸ್ಕಾರಗಳ ಗುರುತೂ ಅಲ್ಲಿ ಇಲ್ಲದಂತೆ ಮಾಡುವೆನು. ಅವನ ಪೂಜಾರಿಗಳನ್ನು ನಿರ್ನಾಮಗೊಳಿಸುವೆನು; 5 ಮಾಳಿಗೆಗಳ ಮೇಲೆ ನಿಂತು ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆರಾಧಿಸುವವರನ್ನು ನಾಶಗೊಳಿಸುವೆನು; ಅಂತೆಯೇ ಸರ್ವೇಶ್ವರನ ಆರಾಧಕರೆಂದು ಪ್ರಮಾಣಮಾಡಿ, ಮಲ್ಕಾಮನ ಮೇಲೂ ಪ್ರಮಾಣ ಮಾಡುವವರನ್ನು ವಿನಾಶಗೊಳಿಸುವೆನು. 6 ನನಗೆ ಬೆನ್ನು ತೋರಿಸಿ, ನನ್ನ ದರ್ಶನವನ್ನು ಬಯಸದೆ, ನನ್ನ ಮಾರ್ಗಬಿಟ್ಟವರನ್ನು ಧ್ವಂಸಮಾಡುವೆನು.” 7 “ಸ್ವಾಮಿ ಸರ್ವೇಶ್ವರ ನ್ಯಾಯತೀರ್ಪು ನೀಡುವ ದಿನ ಸಮೀಪಿಸಿದೆ; ಆದುದರಿಂದ ಅವರ ಸನ್ನಿಧಿಯಲ್ಲಿ ಮೌನ ತಾಳಿರಿ. ಸರ್ವೇಶ್ವರ, ಯಜ್ಞದ ಔತಣವನ್ನು ಸಿದ್ಧಗೊಳಿಸಿದ್ದಾರೆ. ಅತಿಥಿಗಳನ್ನು ಪವಿತ್ರೀಕರಿಸಿದ್ದಾರೆ. 8 ಸ್ವಾಮಿಯ ಆ ಯಜ್ಞದ ದಿನದಂದು ನಾನು ದೇಶಾಧಿಪತಿಗಳನ್ನು, ರಾಜವಂಶದವರನ್ನು, ಹಾಗೂ ಅನ್ಯಮತೀಯ ವಸ್ತ್ರಧಾರಿಗಳನ್ನು ದಂಡಿಸುವೆನು. 9 ಹೊಸ್ತಿಲನ್ನು ದಾಟಿ ಮೋಸ, ವಂಚನೆ, ಹಿಂಸಾಚಾರಗಳಿಂದ ದೋಚಿದವುಗಳನ್ನು ತಂದು ತಮ್ಮ ದೇವರ ಮಂದಿರವನ್ನು ತುಂಬಿಸುವ ಎಲ್ಲರನ್ನೂ ಆ ದಿನದಂದು ನಾನು ದಂಡಿಸುವೆನು. 10 “ಆ ದಿನದಲ್ಲಿ ಜೆರುಸಲೇಮಿನಲ್ಲಿರುವ ಮೀನುಬಾಗಿಲಿನ ಬಳಿ ಕೂಗಾಟವನ್ನು, ಪಟ್ಟಣದ ಹೊಸ ಬಡಾವಣೆಯಲ್ಲಿ ಗೋಳಾಟವನ್ನು, ಹಾಗೂ ಬೆಟ್ಟಗುಡ್ಡಗಳಲ್ಲಿ ಭೀಕರ ಗದ್ದಲವನ್ನು ಕೇಳುವಿರಿ. ಇದು ಸರ್ವೇಶ್ವರಸ್ವಾಮಿಯ ನುಡಿ. 11 ಆಗ ಪಟ್ಟಣದ ಸಂತೆಬೀದಿಗಳಲ್ಲಿ ವಾಸಮಾಡುವವರು ಅತ್ತು ಪ್ರಲಾಪಿಸಲಿ; ವ್ಯಾಪಾರಸ್ಥರೆಲ್ಲರೂ ಸತ್ತುಹೋಗಿರುವರು; ಅಕ್ಕಸಾಲಿಗರೆಲ್ಲರೂ ಕಣ್ಮರೆಯಾಗಿರುವರು. 12 “ಆಗ ದೀಪವನ್ನು ಹಿಡಿದುಕೊಂಡು ಜೆರುಸಲೇಮನ್ನೆಲ್ಲಾ ಹುಡುಕಿಬಿಡುವೆನು. ‘ಸರ್ವೇಶ್ವರ ಮೇಲನ್ನಾಗಲಿ, ಕೇಡನ್ನಾಗಲಿ ಏನನ್ನೂ ಮಾಡುವುದಿಲ್ಲ’ ಎಂದುಕೊಳ್ಳುವ ಮದ್ಯದ ಮಡ್ಡಿಯಂಥ ಜಡ ಮನಸ್ಕರನ್ನು ದಂಡಿಸುವೆನು. 13 ಅವರ ಆಸ್ತಿಪಾಸ್ತಿಯೆಲ್ಲಾ ಸೂರೆಯಾಗುವುದು, ಅವರ ಮನೆಮಠಗಳು ಹಾಳಾಗುವುವು; ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಮಾಡರು; ದ್ರಾಕ್ಷಾತೋಟಗಳನ್ನು ಬೆಳೆಸಿಕೊಂಡರೂ ಅವುಗಳಿಂದ ದ್ರಾಕ್ಷಾರಸವನ್ನು ಕುಡಿಯರು.” ನ್ಯಾಯತೀರ್ಪಿನ ಕರಾಳ ದಿನ 14 ಸರ್ವೇಶ್ವರಸ್ವಾಮಿಯ ಮಹಾದಿನ ಹತ್ತಿರವಾಯಿತು; ಸಮೀಪಿಸಿತು. ಅದು ಬಹು ತ್ವರೆಯಾಗಿ ಬರುತ್ತಿದೆ; ಅದು ಕಠೋರವಾದ ದಿನ, ಆ ದಿನದ ಸುದ್ದಿ ಕಹಿಯಾದುದು, ಎಂಥಾ ಶೂರರನ್ನೂ ಕೂಡ ಘೋರವಾಗಿ ಗೋಳಾಡಿಸುವಂಥದ್ದು. 15 ಅದು ರೌದ್ರದ ದಿನ, ಕಷ್ಟ - ಸಂಕಟದ ದಿನ, ನಾಶವಿನಾಶದ ದಿನ, ಕತ್ತಲು ಕಾರ್ಗತ್ತಲ ದಿನ, ಕಾರ್ಮುಗಿಲು ಕವಿದ ಕರಾಳ ದಿನ; 16 ಕೋಟೆಕೊತ್ತಲಗಳನ್ನು, ಘನಗೋಪುರಗಳನ್ನು ಆಕ್ರಮಿಸಲು ಯುದ್ಧಕಹಳೆಯು ಮೊಳಗುವ ದಿನ, ಯುದ್ಧಘೋಷಣೆಗಳನ್ನು ಆರ್ಭಟಿಸುವ ದಿನ. 17 ಸರ್ವೇಶ್ವರ ಇಂತೆನ್ನುತ್ತಾರೆ, “ಮಾನವರ ಮೇಲೆ ಕಷ್ಟ - ಸಂಕಷ್ಟಗಳನ್ನು ಬರಮಾಡುವೆನು; ಅವರು ಕುರುಡರಂತೆ ತಡಕಾಡುವರು. ಏಕೆಂದರೆ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ; ಅವರ ರಕ್ತವನ್ನು ನೀರಿನಂತೆ ಚೆಲ್ಲಲಾಗುವುದು; ಅವರ ಹೆಣಗಳನ್ನು ಕಸದಂತೆ ಕೊಳೆಯಲು ಬಿಡಲಾಗುವುದು.” 18 ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India