ಮುನ್ನುಡಿ
ಯೇಸುಸ್ವಾಮಿಯನ್ನು ಕುರಿತಾದ ಶುಭಸಂದೇಶ ಭರದಿಂದ ಪ್ರಚಾರವಾಗುತ್ತಿತ್ತು. ಯೆಹೂದ್ಯರಲ್ಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅದನ್ನು ಅಂಗೀಕರಿಸತೊಡಗಿದರು. ಆಗ, ಈ ಹೊಸ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರಕ್ಕೆ ಬದ್ಧರೇ ಎಂಬ ಪ್ರಶ್ನೆ ತಲೆಯೆತ್ತಿಕೊಂಡಿತು. ಅದಕ್ಕೆ ಪೌಲನು, “ಕ್ರಿಸ್ತಸ್ಥನಾಗಿ ಬಾಳಲಿಚ್ಛಿಸುವವನಿಗೆ ಅತ್ಯಗತ್ಯವಾದುದು ವಿಶ್ವಾಸ. ವಿಶ್ವಾಸದ ಮೂಲಕ ಪ್ರತಿಯೊಬ್ಬನೂ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತಾನೆ: ಅಂಥವನು ಮೋಶೆಯ ಧರ್ಮಶಾಸ್ತ್ರಕ್ಕೆ ಬದ್ಧನಲ್ಲ,” ಎಂದು ಉತ್ತರಿಸುತ್ತಾನೆ.
ಗಲಾತ್ಯ ಎಂಬುದು ರೋಮ್ ಸಾಮ್ರಾಜ್ಯಕ್ಕೆ ಒಳಪಟ್ಟ ಅಂದಿನ ಏಷ್ಯಾಮೈನರ್ ಸೀಮೆಯ ಒಂದು ಪ್ರಾಂತ್ಯ. ಇಲ್ಲಿಗೆ ಬಂದಿದ್ದ ಯೆಹೂದ್ಯ ಕ್ರೈಸ್ತರಲ್ಲಿ ಕೆಲವರು ಪೌಲನ ವಿರುದ್ಧ, “ಒಬ್ಬನು ದೇವರೊಂದಿಗೆ ಸತ್ಸಂಬಂಧವನ್ನು ಪಡೆಯಬೇಕಾದರೆ, ಅಂಥವನು ಮೋಶೆಯ ಧರ್ಮಶಾಸ್ತ್ರಕ್ಕೆ ಬದ್ಧನಾಗಲೇಬೇಕು,” ಎಂದು ವಾದಿಸುತ್ತಿದ್ದರು. ಈ ತಪ್ಪುಬೋಧನೆಗೆ ಮರುಳಾಗಿದ್ದವರನ್ನು ವಿಶ್ವಾಸದ ಮಾರ್ಗಕ್ಕೆ ತರಲು ಪೌಲನು ಈ ಪತ್ರವನ್ನು ಬರೆಯಬೇಕಾಯಿತು.
ಪೌಲನಿಗೆ ಪ್ರೇಷಿತನಾಗಲು ಕರೆಬಂದದ್ದು ಮಾನವರಿಂದ ಅಲ್ಲ, ದೇವರಿಂದಲೇ; ಆದುದರಿಂದ ‘ಕ್ರಿಸ್ತಯೇಸುವಿನ ಪ್ರೇಷಿತ’ ಎನಿಸಿಕೊಳ್ಳುವ ಹಕ್ಕು ತನಗಿದೆ ಎಂದು ಮೊಟ್ಟಮೊದಲು ಪೌಲನು ಸಮರ್ಥಿಸುತ್ತಾನೆ. ಯೆಹೂದ್ಯೇತರರೇ ತನ್ನ ಬೋಧನಾರ್ಥಿಗಳೆಂದು ವಾದಿಸುತ್ತಾನೆ. ಅನಂತರ ‘ಒಬ್ಬನು ದೇವರೊಂದಿಗೆ ಸತ್ಸಂಬಂಧವನ್ನು ಹೊಂದುವುದು ವಿಶ್ವಾಸದಿಂದ,’ ಎಂಬ ತನ್ನ ನಿಲುವನ್ನು ಪವಿತ್ರಗ್ರಂಥದ ಕೆಲವು ಉದಾಹರಣೆಗಳಿಂದ ಪುಷ್ಟೀಕರಿಸುತ್ತಾನೆ. ಪ್ರೀತಿಯೇ ಕ್ರೈಸ್ತವಿಶ್ವಾಸದ ಫಲ. ಯೇಸುವಿನ ಮೇಲೆ ನಮಗಿರುವ ಪ್ರೀತಿ, ಕ್ರಿಸ್ತೀಯ ಸನ್ನಡತೆಯಲ್ಲಿ ವಿಕಾಸಗೊಳ್ಳುತ್ತದೆ ಎಂಬುದನ್ನು ವಿವರಿಸುತ್ತಾನೆ.
ಪರಿವಿಡಿ
ಪೀಠಿಕೆ 1:1-10
ಪೌಲನ ಪ್ರೇಷಿತಾಧಿಕಾರ 1:11—2:21
ದೈವಾನುಗ್ರಹದ ಸಂದೇಶ 3:1—4:31
ಕ್ರೈಸ್ತಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ 5:1—6:10
ಸಮಾಪ್ತಿ 6:11-18