ಗಲಾತ್ಯದವರಿಗೆ 6 - ಕನ್ನಡ ಸತ್ಯವೇದವು C.L. Bible (BSI)ಸತ್ಕಾರ್ಯಗಳಿಂದ ಸತ್ಫಲ 1 ಸಹೋದರರೇ, ನಿಮ್ಮಲ್ಲಿ ಯಾರಾದರೂ ತಪ್ಪಿತಸ್ಥರಾಗಿದ್ದರೆ, ಆಧ್ಯಾತ್ಮಿಕ ಜೀವಿಗಳಾದ ನೀವು ಅಂಥವನನ್ನು ನಯವಿನಯದಿಂದ ತಿದ್ದಿ ಸರಿಯಾದ ದಾರಿಗೆ ತರಬೇಕು. ಆದರೆ ನೀನೂ ಅವನಂತೆ ಪಾಪಪ್ರಚೋದನೆಗೆ ಒಳಗಾಗದಂತೆ ಎಚ್ಚರಿಕೆಯಿಂದಿರಬೇಕು. 2 ಒಬ್ಬರ ಭಾರವನ್ನು ಒಬ್ಬರು ಹೊತ್ತುಕೊಳ್ಳಿ. ಹೀಗೆ ಕ್ರಿಸ್ತಯೇಸುವಿನ ನಿಯಮವನ್ನು ನೆರವೇರಿಸುವಿರಿ. 3 ಅಲ್ಪನು ತಾನು ಶ್ರೇಷ್ಠನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ, ಅಷ್ಟೆ. 4 ಪ್ರತಿಯೊಬ್ಬನೂ ತನ್ನ ನಡತೆಯನ್ನು ತನ್ನಷ್ಟಕ್ಕೆ ತಾನೇ ಪರಿಶೋಧಿಸಿಕೊಳ್ಳಲಿ. ತನ್ನ ನಡತೆ ಒಳಿತಾಗಿದ್ದರೆ ಹೆಮ್ಮೆಪಡಲಿ. ಆದರೆ ಇತರರೊಂದಿಗೆ ಹೋಲಿಸಿ ಹೆಮ್ಮೆಪಡಬೇಕಾಗಿಲ್ಲ. 5 ಪ್ರತಿಯೊಬ್ಬನೂ ತನ್ನ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು. 6 ದೇವರ ವಾಕ್ಯದ ಉಪದೇಶ ಪಡೆಯುವವನು ಉಪದೇಶ ಮಾಡುವವನೊಂದಿಗೆ ತನಗೆ ಇರುವ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ. 7 ಮೋಸಹೋಗದಿರಿ, ದೇವರನ್ನು ವಂಚಿಸಬಹುದೆಂದು ಭಾವಿಸದಿರಿ; ಬಿತ್ತುವುದನ್ನೇ ಕೊಯ್ಯುತ್ತೇವೆ ಎಂಬುದನ್ನು ನೆನಪಿನಲ್ಲಿಡಿ. 8 ದೈಹಿಕ ವ್ಯಾಮೋಹವೆಂಬ ಸ್ವಭಾವದಲ್ಲಿ ಬಿತ್ತುವವನು ನಾಶವೆಂಬ ಫಲವನ್ನು ಕೊಯ್ಯುತ್ತಾನೆ. ಪವಿತ್ರಾತ್ಮ ಸ್ವಭಾವದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವೆಂಬ ಫಲವನ್ನು ಕೊಯ್ಯುತ್ತಾನೆ. 9 ಸತ್ಕಾರ್ಯಗಳನ್ನು ಮಾಡುವುದರಲ್ಲಿ ಬೇಸರಪಡದಿರೋಣ, ಎದೆಗುಂದದಿರೋಣ; ಆಗ ಸೂಕ್ತಕಾಲದಲ್ಲಿ ಸತ್ಫಲವನ್ನು ಕೊಯ್ಯುವೆವು. 10 ಎಂದೇ ಸಮಯಸಂದರ್ಭಗಳು ಇರುವಾಗಲೇ ಸರ್ವರಿಗೂ ಉಪಕಾರಮಾಡೋಣ. ಅದರಲ್ಲೂ ಮುಖ್ಯವಾಗಿ, ಒಂದೇ ಕುಟುಂಬದವರಂತೆ ಇರುವ ಕ್ರೈಸ್ತವಿಶ್ವಾಸಿಗಳಿಗೆ ಉಪಕಾರ ಮಾಡೋಣ. ಶಿಲುಬೆಯ ಮಹತ್ವ 11 ಈ ದೊಡ್ಡದೊಡ್ಡ ಅಕ್ಷರಗಳನ್ನು ನೋಡಿರಿ; ಇವನ್ನು ನನ್ನ ಸ್ವಂತ ಕೈಯಿಂದಲೇ ಬರೆಯುತ್ತಿದ್ದೇನೆ. 12 ಬಾಹ್ಯಾಚಾರಗಳಿಂದ ತಾವು ಒಳ್ಳೆಯವರು ಎನಿಸಿಕೊಳ್ಳಬೇಕೆನ್ನುವವರು ನೀವು ಸುನ್ನತಿಮಾಡಿಸಿಕೊಳ್ಳಬೇಕೆಂದು ಬಲಾತ್ಕಾರ ಮಾಡುತ್ತಿದ್ದಾರೆ. ಕ್ರಿಸ್ತಯೇಸುವಿನ ಶಿಲುಬೆಯ ನಿಮಿತ್ತ ತಮಗೆ ಹಿಂಸೆಬಾಧೆಗಳು ಉಂಟಾಗಬಾರದು ಎಂಬುದೇ ಅವರ ಉದ್ದೇಶವಾಗಿದೆ. 13 ಸುನ್ನತಿಮಾಡಿಸಿಕೊಳ್ಳುವ ತಾವಾದರೂ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವುದಿಲ್ಲ. ಆದರೆ ನಿಮ್ಮ ದೈಹಿಕ ಸುನ್ನತಿಯಿಂದ, ಅವರು ಹೆಚ್ಚಳಿಕೆ ಗಳಿಸುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಬಯಸುತ್ತಾರೆ. 14 ನನಗಾದರೋ ನಮ್ಮ ಪ್ರಭು ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಬೇರಾವುದರಲ್ಲೂ ಹೆಚ್ಚಳಪಡುವುದು ಬೇಡವೇ ಬೇಡ. ಆ ಶಿಲುಬೆಯ ಮೂಲಕ. ನನ್ನ ಪಾಲಿಗೆ ಲೋಕವೇ ಶಿಲುಬೆಗೆ ಜಡಿಸಿಕೊಂಡು ಸತ್ತಿದೆ; ನಾನೂ ಸಹ ಲೋಕದ ಪಾಲಿಗೆ ಶಿಲುಬೆಗೆ ಜಡಿಸಿಕೊಂಡು ಸತ್ತಿದ್ದೇನೆ. 15 ಸುನ್ನತಿ ಮಾಡಿಸಿಕೊಳ್ಳುವುದೋ, ಮಾಡಿಸಿಕೊಳ್ಳದಿರುವುದೋ ಮಹತ್ತಾದುದಲ್ಲ. ಹೊಸ ಸೃಷ್ಟಿಯಾಗುವುದೇ ಮಹತ್ತರವಾದುದು. 16 ಈ ನಿಯಮವನ್ನು ಅನುಸರಿಸುವ ಎಲ್ಲರಿಗೂ, ಅಂದರೆ ನಿಜ ಇಸ್ರಯೇಲರಾದ ದೇವಜನರೆಲ್ಲರಿಗೂ ಶಾಂತಿಸಮಾಧಾನವೂ ಕೃಪಾಶೀರ್ವಾದವೂ ಲಭಿಸಲಿ! 17 ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ. 18 ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೊಡನೆ ಇರಲಿ! ಆಮೆನ್. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India