ಮುನ್ನುಡಿ
‘ಏಷ್ಯಾ ಮೈನರ್’ ಸೀಮೆಯಲ್ಲಿನ ಎಫೆಸ ನಗರಕ್ಕೆ ಪೂರ್ವದಲ್ಲಿ ಕೊಲೊಸ್ಸೆಯೆಂಬ ಪಟ್ಟಣವಿದೆ. ಎಫೆಸವು ಪ್ರಮುಖ ನಗರವಾಗಿ ರೋಮನ್ನರ ಆಳ್ವಿಕೆಗೆ ಒಳಪಟ್ಟಿತ್ತು. ಕೊಲೊಸ್ಸೆಯ ಸಭೆಯನ್ನು ಪೌಲನೇ ಸ್ಥಾಪಿಸದಿದ್ದರೂ, ಅದು ಅವನ ಧರ್ಮಪ್ರಚಾರ ಕ್ಷೇತ್ರದ ಸರಹದ್ದಿನಲ್ಲಿದ್ದುದರಿಂದ, ಅದರ ಪಾಲನೆಯ ಜವಾಬ್ದಾರಿ ತನಗೆ ಸೇರಿದ್ದೆಂದು ಪೌಲನು ಭಾವಿಸಿದ್ದನು. ಎಂತಲೇ, ಎಫೆಸದಿಂದ ಧರ್ಮಪ್ರಚಾರಕರನ್ನು ಕೊಲೊಸ್ಸೆಯ ಸಭೆಗೆ ಕಳುಹಿಸುತ್ತಿದ್ದನು. ಹೀಗಿರಲು, ಕೆಲವು ಸುಳ್ಳುಬೋಧಕರು ಅಲ್ಲಿ ತಲೆದೋರಿದ್ದಾರೆಂಬ ಸುದ್ದಿ ಪೌಲನ ಕಿವಿಗೆ ಮುಟ್ಟಿತು. ಯಾರಾದರೂ ದೈವಜ್ಞಾನವನ್ನು ಮತ್ತು ಪೂರ್ಣ ಜೀವೋದ್ಧಾರವನ್ನು ಹೊಂದಬೇಕಾದರೆ, ಅಂಥವರು ಅಗೋಚರ ಶಕ್ತಿಗಳನ್ನೂ ವಾನಮಂಡಲದಲ್ಲಿರುವ ಅಧಿಪತಿಗಳನ್ನೂ ಆರಾಧಿಸಬೇಕು; ಸುನ್ನತಿಯನ್ನು ಮಾಡಿಸಿಕೊಳ್ಳಬೇಕು; ಊಟೋಪಚಾರ, ಸ್ವಾಗತ, ಸತ್ಕಾರ ಮುಂತಾದುವುಗಳ ಬಗ್ಗೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸಬೇಕು ಎಂದು ಅವರು ಬೋಧಿಸುತ್ತಿದ್ದರು.
ಪೌಲನು ಈ ಬೋಧನೆಯನ್ನು ಕಟುವಾಗಿ ಖಂಡಿಸಿ, ಕ್ರಿಸ್ತಯೇಸುವಿನ ಶುಭಸಂದೇಶದ ಸಾರಾಂಶವನ್ನು ಎತ್ತಿ ತೋರಿಸುತ್ತಾನೆ. ಸಂಪೂರ್ಣ ಜೀವೋದ್ಧಾರ ಕ್ರಿಸ್ತಯೇಸುವಿನಿಂದಲೇ ಸಾಧ್ಯ. ಶುಭಸಂದೇಶಕ್ಕೆ ವಿರುದ್ಧವಾದ ತತ್ವಗಳು ಹಾಗೂ ಆಚರಣೆಗಳು ಮಾನವನನ್ನು ಪ್ರಭು ಯೇಸುವಿನಿಂದ ದೂರ ಸರಿಸುವುದರಲ್ಲಿ ಸಂದೇಹವಿಲ್ಲ. ಕ್ರಿಸ್ತಯೇಸುವಿನ ಮುಖಾಂತರವೇ ದೇವರು ವಿಶ್ವವನ್ನು ಸೃಷ್ಟಿಸಿದ್ದು, ಅವರ ಮುಖಾಂತರವೇ ದೇವರು ಅದನ್ನು ತಮ್ಮೊಡನೆ ಸಂಧಾನಪಡಿಸಿಕೊಳ್ಳುತ್ತಾರೆ. ಜಗತ್ತು ಉದ್ಧಾರವಾಗಬೇಕಾದರೆ ಕ್ರಿಸ್ತಯೇಸುವಿನಲ್ಲಿ ಅದು ವಿಶ್ವಾಸವನ್ನು ಇಡಬೇಕು. ಅವರೊಂದಿಗೆ ಅನ್ಯೋನ್ಯವಾಗಿ ಬಾಳಬೇಕು. ಇದಲ್ಲದೆ ಬೇರೆ ಮಾರ್ಗವಿಲ್ಲ. ಈ ಗಹನವಾದ ಸತ್ಯ ಭಕ್ತರ ದಿನನಿತ್ಯ ಜೀವನದಲ್ಲಿ ಬೀರಬೇಕಾದ ಪರಿಣಾಮವನ್ನು ಸಹ ಈ ಪತ್ರದಲ್ಲಿ ಲೇಖಕನು ವಿವರಿಸುತ್ತಾನೆ.
ಈ ಪತ್ರವನ್ನು ಕೊಲೊಸ್ಸೆಗೆ ತೆಗೆದುಕೊಂಡುಹೋದ ತುಖಿಕನ ಜೊತೆಯಲ್ಲಿ ದಾಸನಾದ ಒನೇಸಿಮನೂ ಹೋಗಿದ್ದನು. ಈ ಒನೇಸಿಮನ ವಿಷಯವಾಗಿಯೇ ಪೌಲನು ಫಿಲೆಮೋನನಿಗೆ ಒಂದು ಪತ್ರವನ್ನು ಬರೆದಿದ್ದಾನೆ.
ಪರಿವಿಡಿ
ಪೀಠಿಕೆ 1:1—1:8
ಕ್ರಿಸ್ತಯೇಸುವಿನ ವ್ಯಕ್ತಿತ್ವ ಮತ್ತು ಕಾರ್ಯಕಲಾಪ 1:9—2:19
ಕ್ರಿಸ್ತಯೇಸುವಿನಲ್ಲಿ ಹೊಸ ಜೀವನ 2:20—4:6
ಸಮಾಪ್ತಿ 4:7