ಮುನ್ನುಡಿ
ಬೈಬಲ್ ಪವಿತ್ರ ಗ್ರಂಥದ ಪ್ರಾರ್ಥನಾ ಹಾಗೂ ಆಧ್ಯಾತ್ಮಿಕ ಹಾಡುಗಳ ಭಾಗವನ್ನು “ಕೀರ್ತನೆಗಳು” ಎಂದು ಹೆಸರಿಸಲಾಗಿದೆ. ಅನಿಶ್ಚಿತ ಕಾಲಾವಧಿಯಲ್ಲಿ, ಹೇಗೂ ಕ್ರಿ. ಪೂ. 200ಕ್ಕೆ ಮುಂಚಿತವಾಗಿಯೇ ಹಲವಾರು ಕವಿಗಳಿಂದ ಇವು ರಚಿತವಾದವು. ಯೆಹೂದ್ಯ ಭಕ್ತಾದಿಗಳು ಇವುಗಳನ್ನು ಸಂಗ್ರಹಿಸಿ, ತಮ್ಮ ಪ್ರಾರ್ಥನಾವಿಧಿಗಳಲ್ಲಿ ಬಳಕೆಗೆ ತಂದರು. ಇವುಗಳಿಗೆ ಕ್ರಮೇಣ ಬೈಬಲ್ಲಿನಲ್ಲೇ ಖಚಿತವಾದ ಸ್ಥಾನಮಾನ ದೊರಕಿತು.
ದೈವಸ್ತುತಿ ಹಾಗೂ ದೈವಾರಾಧನಾ ಗೀತೆಗಳು; ಸಹಾಯಕ್ಕಾಗಿ, ಸಂರಕ್ಷಣೆಗಾಗಿ, ಜೀವೋದ್ಧಾರಕ್ಕಾಗಿ ಪ್ರಾರ್ಥನೆಗಳು; ಉಪಕಾರ ಸ್ಮರಣೆ, ಕ್ಷಮಾಯಾಚನೆ, ಶತ್ರುಗಳ ದಂಡನೆ - ಇವು ಈ ಕೀರ್ತನೆಗಳ ವಿಷಯಗಳು. ಇವುಗಳಲ್ಲಿ ಕೆಲವು ವೈಯಕ್ತಿಕವಾದುವು ಮತ್ತೆ ಕೆಲವು ರಾಷ್ಟ್ರೀಯ ಮನೋಭಾವನೆಯಿಂದ ಕೂಡಿರುವಂಥವು; ಇನ್ನೂ ಕೆಲವು ದೇವರ ಪ್ರಜಾಸಮುದಾಯಕ್ಕೆ ಅನ್ವಯಿಸುವಂಥವು.
ಯೇಸುಸ್ವಾಮಿ ಹಾಗೂ ಹೊಸ ಒಡಂಬಡಿಕೆಯ ಲೇಖಕರು ಈ ಕೀರ್ತನೆಗಳನ್ನು ಧಾರಾಳವಾಗಿ ಬಳಸಿ ಅನುಮೋದಿಸಿದ್ದಾರೆ. ಆದಿಯಿಂದಲೂ ಕ್ರೈಸ್ತಭಕ್ತಾದಿಗಳು ಇವುಗಳನ್ನು ಭಕ್ತಿವಿಶ್ವಾಸಗಳಿಂದ ಹಾಡುತ್ತಾ ಪಠಿಸುತ್ತಾ ಬಂದಿದ್ದಾರೆ.
ಹಳೆಯ ಒಡಂಬಡಿಕೆಯಲ್ಲಿ ದೇವರಿಗೆ ಕೊಡಲಾಗಿರುವ ಹೆಸರುಗಳಲ್ಲಿ “YAHWEH” (ಯೆಹೋವ) ಎಂಬುದು ಒಂದು. ಈ ಹೆಸರನ್ನು “ಸರ್ವೇಶ್ವರ” ಅಥವಾ “ಸರ್ವೇಶ್ವರ ಸ್ವಾಮಿ” ಎಂದು ಕನ್ನಡಿಸಲಾಗಿದೆ. ಇದೇ ಹೆಸರನ್ನು ಹಾಗೂ ಇನ್ನಿತರ ದೇವರ ಹೆಸರುಗಳನ್ನು ಗ್ರೀಕ್ (LXX) ನಲ್ಲಿ “KURIOS” ಎಂದು ಭಾಷಾಂತರಿಸಲಾಗಿದೆ. ಹೊಸ ಒಡಂಬಡಿಕೆಗೆ ಗ್ರೀಕ್ ಭಾಷೆಯೇ ಮೂಲಭಾಷೆ. ಅಲ್ಲಿ “KURIOS” ಎಂಬ ಹೆಸರನ್ನು ಹಳೆಯ ಕಾಲದಲ್ಲಿ ‘ಕರ್ತರು’ ಎಂದೂ ಈ ಹೊಸ ತರ್ಜುಮೆಯಲ್ಲಿ ‘ಪ್ರಭು’ ಎಂದೂ ಕನ್ನಡಿಸಲಾಗಿದೆ. ಮೇಲೆ ಹೇಳಿದ ಕಾರಣಕ್ಕಾಗಿ ಈ ಕೀರ್ತನಾಭಾಗದಲ್ಲಿ ಬರುವ ಹಿಬ್ರೂ “YAHWEH” ಹಾಗೂ ಗ್ರೀಕ್ “KURIOS” ಎಂಬ ಪದಗಳನ್ನು “ಪ್ರಭು” ಎಂದೇ ಕನ್ನಡಿಸಿದ್ದೇವೆ. ಓದುಗರು ಇದನ್ನು ಗಮನಿಸತಕ್ಕದ್ದು.
ಪ್ರಾಚೀನ ಕಾಲದ ಹಿಬ್ರೂ ಭಾಷೆಯ ಈ ಕವಿತೆಗಳನ್ನು ಸರಳ ಕನ್ನಡಕ್ಕೆ ತರಲು ಇಲ್ಲಿ ಯತ್ನಿಸಲಾಗಿದೆ. ಸಾಧ್ಯವಾದ ಮಟ್ಟಿಗೆ ಪದ್ಯರೂಪದಲ್ಲೇ ತರ್ಜುಮೆಮಾಡಲು ಪ್ರಯತ್ನಿಸಲಾಗಿದೆ. ಬಹುಶಃ ಭಾರತದಲ್ಲೇ ಇದು ಪ್ರಪ್ರಥಮ ಪ್ರಯೋಗ ಈ ದಿಸೆಯಲ್ಲಿ ಎನ್ನಬಹುದು.
ಪರಿವಿಡಿ
ಇಲ್ಲಿನ 150 ಕೀರ್ತನೆಗಳನ್ನು 5 ವಿಭಾಗಗಳನ್ನಾಗಿ ವಿಂಗಡಿಸಬಹುದು.
1. ಕೀರ್ತನೆಗಳು 1—41
2. ಕೀರ್ತನೆಗಳು 42—72
3. ಕೀರ್ತನೆಗಳು 73—89
4. ಕೀರ್ತನೆಗಳು 90—106
5. ಕೀರ್ತನೆಗಳು 107—150