ಕೀರ್ತನೆಗಳು 98 - ಕನ್ನಡ ಸತ್ಯವೇದವು C.L. Bible (BSI)ಪ್ರಭು : ಪೃಥ್ವೀಪತಿ - ನ್ಯಾಯಾಧಿಪತಿ 1 ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು I ಎಸಗಿಹನಾತನು ಪವಾಡಕಾರ್ಯಗಳನು I ಗಳಿಸಿತಾತನ ಕೈ ಪೂತಭುಜ ಗೆಲುವನು II 2 ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II 3 ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I ನಮ್ಮ ದೇವ ಸಾಧಿಸಿದ ಜಯಗಳಿಕೆ II ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II 4 ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ I ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ II 5 ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ I ಭಜಿಸಿರಿ ಆತನನು ವಾದ್ಯಮೇಳದೊಂದಿಗೆ II 6 ಊದಿರಿ ಕೊಂಬನು, ತುತೂರಿಯನು I ಉದ್ಘೋಷಿಸಿರಿ ಪ್ರಭು ರಾಜನನು II 7 ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು I ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು II 8 ಚಪ್ಪಾಳೆ ಹೊಡೆಯಲಿ ನದಿಗಳು I ತಟ್ಟಾಡಲಿ ಬೆಟ್ಟಗುಡ್ಡಗಳು II 9 ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು I ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India