Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 90 - ಕನ್ನಡ ಸತ್ಯವೇದವು C.L. Bible (BSI)


ಭಾಗ - ೪ ( ಕೀರ್ತ. 90—106 ) ನಶ್ವರ ಮಾನವನಿಗೆ ಶಾಶ್ವತಾಶ್ರಯ

1 ಪ್ರಭೂ, ತಲತಲಾಂತರಕ್ಕೆ I ಶ್ರೀನಿವಾಸ ನೀನೆಮಗೆ II

2 ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ I ಭೂದೇಶಗಳು ಆಗುವುದಕೆ ಮೊದಲಿಂದ I ನೀನೆಮಗೆ ದೇವರು ಯುಗಯುಗಗಳಿಂದ II

3 ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ I ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ II

4 ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ I ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ II

5 ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II

6 ಚಿಗುರಿ ಹೂಬಿಡುವುದದು ಬೆಳಗಿನಲಿ I ಸೊರಗಿ ತರಗಾಗುವುದು ಬೈಗಿನಲಿ II

7 ಇಲ್ಲವಾಗುವೆವು ನಿನ್ನ ಕೋಪದಿಂದ I ತಲ್ಲಣಗೊಳ್ವೆವು ನಿನ್ನ ರೌದ್ರದಿಂದ II

8 ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ ಪಾಪದೋಷಗಳು I ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ ಗುಪ್ತಾಪರಾಧಗಳು II

9 ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು I ನಿಟ್ಟುಸಿರಿನಂತೆ ಮುಗಿವುದೆಮ್ಮ ಬದುಕುಬಾಳು II

10 ನಮ್ಮ ಆಯುಷ್ಕಾಲ ಎಪ್ಪತ್ತು ವರುಷ I ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ II

11 ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II

12 ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು I ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು II

13 ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ? I ನಿನ್ನೀ ಸೇವಕರ ಮೇಲಿರಲಿ ಮರುಕ II

14 ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ I ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ II

15 ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ I ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷಕಾಲ II

16 ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ I ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ II

17 ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ I ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ I ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು