ಕೀರ್ತನೆಗಳು 87 - ಕನ್ನಡ ಸತ್ಯವೇದವು C.L. Bible (BSI)ಸಿಯೋನ್ ನಗರಿ ದೇವಜನರೆಲ್ಲರ ಮಾತೃಭೂಮಿ 1 ಪವಿತ್ರ ಪರ್ವತದಲಿ ಕರ್ತನು I ಸ್ಥಾಪಿಸಿಹನು ತನ್ನ ನಗರವನು II 2 ಯಕೋಬ ವಂಶದ ಸಕಲ ನಿವಾಸಿಗಳಿಗಿಂತ I ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ II 3 ದೈವ ಶ್ರೀನಗರವೇ, ಕೇಳು ಇವನ್ನು I ನಿನ್ನ ಕುರಿತ ಅತಿಶಯೋಕ್ತಿಗಳನು : II 4 “ನನಗೆ ಮಣಿಯುವ ರಾಷ್ಟ್ರಗಳಲಿ I ಈಜಿಪ್ಟ್, ಬಾಬೆಲ್ ದೇಶಗಳನು ಲೆಕ್ಕಿಸುವೆ II ಜೆರುಸಲೇಮಿನ ನಿವಾಸಿಗಳಲಿ I ಪಿಲಿಷ್ಟಿಯ, ಟೈರ್, ಎಥಿಯೋಪಿಯ ಜನ ಸೇರಿವೆ II 5 ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ I ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ” II 6 ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು I ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು II 7 ಗಾಯಕ ನರ್ತಕರೂ ಹಾಡುವರೀ ಹಾಡ I “ನಮ್ಮೆಲ್ಲರ ಜೀವದೊರೆತೆ ನೀನೇ ನೋಡ” II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India