ಕೀರ್ತನೆಗಳು 85 - ಕನ್ನಡ ಸತ್ಯವೇದವು C.L. Bible (BSI)ರಾಷ್ಟ್ರಾಭಿವೃದ್ಧಿಗಾಗಿ ಪ್ರಾರ್ಥನೆ 1 ಪ್ರಭೂ, ತೋರಿಸಿದೆ ಕರುಣೆ ನಿನ್ನ ನಾಡಿಗೆ I ಮರಳಿಸಿದೆ ಸುಕ್ಷೇಮವನು ಯಕೋಬ್ಯರಿಗೆ II 2 ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು I ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು II 3 ತೊರೆದುಬಿಟ್ಟೆ ಸ್ವಾಮೀ, ನಿನ್ನ ರೋಷವನು I ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು II 4 ಪುನಶ್ಚೇತನಗೊಳಿಸೆಮ್ಮನು ದೇವ, ಉದ್ಧಾರಕ I ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ II 5 ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ? ತಲತಲಾಂತರಗಳಿಗೂ ಕೋಪವನು ಬೆಳೆಸುವೆಯಾ? 6 ನವಜೀವವನು ತುಂಬಿಸಲಾರೆಯಾ ನಮ್ಮಲಿ? I ಆಗ ನಿನ್ನ ಜನರು ಆನಂದಿಸುವರು ನಿನ್ನಲಿ II 7 ತೋರಿಸೆಮಗೆ ಪ್ರಭು ಕರುಣೆಯನು I ಅನುಗ್ರಹಿಸೆಮಗೆ ರಕ್ಷಣೆಯನು II 8 ನಾ ಕೇಳುತ್ತಿರುವೆನು, ಪ್ರಭು ಹೇಳುವುದನು I ತನ್ನ ಜನರಿಗಾತ ನುಡಿವುದು ಶಾಂತಿಯನು I ಇನ್ನಾದರು ತೊರೆಯೋಣ ಮೂರ್ಖತೆಯನು II 9 ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ I ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ II 10 ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು I ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು II 11 ಸತ್ಯತೆಯು ಹುಟ್ಟುವುದು ಭೂಮಿಯಿಂದ I ನೀತಿಯು ದೃಷ್ಟಿಸುವುದು ಗಗನದಿಂದ II 12 ಪ್ರಭು ಕೊಟ್ಟೇ ತೀರುವನು ಒಳಿತನು I ನಮ್ಮ ನಾಡು ನೀಡುವುದು ಬೆಳೆಯನು II 13 ನಡೆವುದು ಪ್ರಭುವಿನ ಮುಂದೆ ನೀತಿ I ಮಾಡುವುದು ಆತನ ಹೆಜ್ಜೆಗೆ ಹಾದಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India