ಕೀರ್ತನೆಗಳು 84 - ಕನ್ನಡ ಸತ್ಯವೇದವು C.L. Bible (BSI)ತೀರ್ಥಯಾತ್ರಿಕನ ಕೀರ್ತನೆ 1 ಹೇ ಪ್ರಭು, ಸ್ವರ್ಗ ಸೇನಾಧೀಶ್ವರ I ನಿನ್ನ ನಿವಾಸಗಳೆನಿತೋ ಸುಂದರ II 2 ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ I ಕಾಣಬೇಕೆಂದು ಪ್ರಭುವಿನ ಪ್ರಾಂಗಣ II 3 ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧೀಶ್ವರ I ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ I ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ II 4 ನಿನ್ನ ಮಂದಿರದಲಿ ವಾಸಿಸುವವರು ಧನ್ಯರು I ನಿರಂತರವು ನಿನ್ನ ಗುಣಗಾನ ಮಾಡುವರವರು II 5 ನಿನ್ನಿಂದ ಶಕ್ತಿಪಡೆಯುವವರು ಧನ್ಯರು I ಸಿಯೋನ್ ಶಿಖರಕ್ಕವರು ಪ್ರಿಯ ಯಾತ್ರಿಕರು II 6 ದಾಟುವಾಗ ಬಾಕಾ ಕಣಿವೆಯನು I ಚಿಲುಮೆಗಳನಾಗಿ ಮಾಡುವರದನು II ಮುಂಗಾರು ಮಳೆಯು ಸುರಿಯಲು I ತುಂಬಿ ತುಳುಕುವುದಾ ಸರಸಿಗಳು II 7 ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ I ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ II 8 ಸ್ವರ್ಗಸೇನಾಧೀಶ್ವರ, ಸ್ವಾಮಿದೇವ ಕಿವಿಗೊಡು ನನ್ನ ಮೊರೆಗೆ I ಯಕೋಬ ಕುಲದೇವಾ, ನನ್ನ ಪ್ರಾರ್ಥನೆ ಬೀಳಲಿ ನಿನ್ನ ಕಿವಿಗೆ II 9 ನಿನ್ನ ಮಂದಿರದಲಿ ಕಳೆದ ದಿನವೊಂದು I ತಿಳಿವೆನು ಸಾವಿರ ದಿನಕೂ ಮೇಲೆಂದು II 10 ದುರುಳರ ಬಿಡಾರದಲಿ ನಾ ವಾಸಮಾಡುವುದರ ಬದಲು I ನಿನ್ನಾಲಯದ ದ್ವಾರಪಾಲಕನಾಗಿರುವುದೆ ಮೇಲು II 11 ದೇವನೆಮಗೆ ಬೆಳಕು ಕೊಡುವ ಸೂರ್ಯನು I ಕಾದಿಟ್ಟು ರಕ್ಷಿಸುವ ಗುರಾಣಿಯು I ಸನ್ಮಾರ್ಗಿಗೆ ಈವನು ಸಕಲ ವರಗಳನು II 12 ಪ್ರಭುವೇ, ಸ್ವರ್ಗಸೇನಾಧೀಶ್ವರನೇ I ನಿನ್ನಲಿ ನಂಬಿಕೆ ಇಡುವವನೇ ಧನ್ಯನು I |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India