ಕೀರ್ತನೆಗಳು 83 - ಕನ್ನಡ ಸತ್ಯವೇದವು C.L. Bible (BSI)ಶತ್ರುವಿನಾಶಕ್ಕಾಗಿ ಕರೆ 1 ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II 2 ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು I ತಲೆಯೆತ್ತಿಕೊಂಡಿಹರು ನಿನ್ನ ದ್ವೇಷಿಗಳು II 3 ಕುತಂತ್ರಮಾಡುತಿಹರು ನಿನ್ನ ಪ್ರಜೆಗೆ ವಿರುದ್ಧ I ಆಲೋಚಿಸುತಿಹರು ನಿನ್ನ ಶರಣರಿಗೆ ವಿರುದ್ಧ II 4 ಇಂತೆನ್ನುತಿಹರು : “ಬನ್ನಿ ಸಂಹರಿಸೋಣ I ಆತನ ಜನಾಂಗ ಉಳಿಯದಂತೆ ಮಾಡೋಣ I ಇಸ್ರಯೇಲೆಂಬ ನಾಮವನಳಿಸಿಬಿಡೋಣ” II 5 ಎದೋಮ್ಯರ ಪಾಳೆಯದವರು ಇಷ್ಮಾಯೇಲ್ಯರು, I ಗೇಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, II 6-7 ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು I ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು I ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು II 8 ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು I ಲೋಟನ ವಂಶಕ್ಕೆ ಭುಜಬಲವಾಗಿಹರು II 9 ಮಾಡವರಿಗೆ ಪ್ರಭೂ, ನೀ ಮಿದ್ಯಾನ್ಯರಿಗೆ ಮಾಡಿದಂತೆ I ಕಿಷೋನ್ ನದಿಯ ಬಳಿ ಸೀಸೆರ್‍ಯಾಬೀನರಿಗೆ ಮಾಡಿದಂತೆ II 10 ಎಂದೋರಿನಲ್ಲವರು ಕೊಲೆಯಾದರು I ಹೊಲಗದ್ದೆಗಳಿಗೆ ಗೊಬ್ಬರವಾದರು II 11-12 ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II 13 ಮಾಡಿವರನು ದೇವಾ, ಗಾಳಿಗೆ ತೂರುವ ಹೊಟ್ಟಿನಂತೆ I ಸುಂಟರಗಾಳಿಯಲಿ ಮೇಲೇಳುವ ದೂಳೀಪಟದಂತೆ II 14 ಕಾಡುಮೇಡನು ಸುಡುವಾ ಬೆಂಕಿಯಂತೆ I ಪರ್ವತವನೆ ಉರಿಸುವ ಜ್ವಾಲೆಯಂತೆ II 15 ಓಡಿಸೋಡಿಸವರನು ನೀ ಬೀಸುವ ಬಿರುಗಾಳಿಗೆ I ಗುರಿಪಡಿಸವರನು ನಿನ್ನಾ ಚಂಡಮಾರುತಕೆ II 16 ಕವಿಯಲಿ ಅವಮಾನ ನಿಂದೆ ಇವರ ಮುಖವನು I ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು II 17 ಕಳವಳಗೊಳ್ಳಲಿ ಅವರು ಸತತವು ಲಜ್ಜೆಯಿಂದ I ಅವರಳಿದುಹೋಗಲಿ ಅವಮಾನ ನಿಂದೆಗಳಿಂದ II 18 ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು I ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India