ಕೀರ್ತನೆಗಳು 8 - ಕನ್ನಡ ಸತ್ಯವೇದವು C.L. Bible (BSI)ದೈವಮಹಿಮೆ ಮಾನವನ ಹಿರಿಮೆ 1 ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I ಬೆಳಗಿದೆ ನಿನ್ನ ವೈಭವ ಗಗನಾದ್ಯಂತ II 2 ವಿರೋಧಿಗಳ ಬಾಯನು ಮುಚ್ಚಿಸಿದೆ ಬಾಲ ಬಾಲೆಯರ ಬಾಯಿಂದಲೆ I ಹಗೆಗಳನು ದುರ್ಗದಂತೆ ತಡೆದೆ ಮೊಲೆಗೂಸುಗಳ ನಾಲಿಗೆಯಿಂದಲೆ II 3 ಆಕಾಶಮಂಡಲ ನಿನ್ನ ಕೈಕೆಲಸವಯ್ಯಾ I ಚಂದ್ರ ನಕ್ಷತ್ರಗಳು ನಿನ್ನ ರಚನೆಗಳಯ್ಯಾ II 4 ಇಂತಿರಲು, ಮನುಜನು ಎಷ್ಟರವನು ನೀನವನನು ಲಕ್ಷಿಸಲು? I ಏತರದವನು ನರಮಾನವನು ನೀನವನನು ಪರಾಮರಿಸಲು? II 5 ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II 6 ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ I ಒಳಪಡಿಸಿದೆ ಸಕಲವನು ಅವನ ಪಾದದಡಿಗೆ II 7-8 ಕುರಿಗಳನು, ಕರುಗಳನು, ಕಾಡುಮೃಗಗಳನು I ಗರಿಗಳನು, ಮೀನುಗಳನು, ಜಲಚರಗಳನು I ಕರಗತ ಮಾಡಿದೆ ನೀ ಅವನಿಗೆಲ್ಲವನು II 9 ಪ್ರಭು, ಓ ಎಮ್ಮ ಪ್ರಭು, ನಿನ್ನ ನಾಮಾಮೃತ I ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India