ಕೀರ್ತನೆಗಳು 79 - ಕನ್ನಡ ಸತ್ಯವೇದವು C.L. Bible (BSI)ನಾಡಿನ ಬಿಡುಗಡೆಗಾಗಿ ಪ್ರಾರ್ಥನೆ 1 ಹೊಕ್ಕಿದರು ದೇವಾ, ಮ್ಲೇಚ್ಛರು ನಿನ್ನ ಸ್ವಂತನಾಡನು I ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನುI ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು II 2 ಅರ್ಪಿಸಿದರು ನಿನ್ನ ದಾಸರಾ ಶವಗಳನು ಗಗನ ಪಕ್ಷಿಗಳಿಗೆ I ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ II 3 ನೀರಂತೆ ಚೆಲ್ಲಿ ಹರಾ ನೆತ್ತರನು ಜೆರುಸಲೇಮ್ ಸುತ್ತಲು I ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು II 4 ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ I ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ II 5 ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? I ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ? II 6 ಸುರಿ ರೌದ್ರವನು ನಿನ್ನನರಿಯದಾ ಮ್ಲೇಚ್ಛರ ಮೇಲೆ I ನಿನ್ನ ಶ್ರೀನಾಮವನು ಉಚ್ಚರಿಸದಾ ರಾಜ್ಯಗಳ ಮೇಲೆ II 7 ನುಂಗಿಬಿಟ್ಟರಾ ಜನರು ಯಕೋಬ ವಂಶದವರನು I ಹಾಳುಮಾಡಿ ಬಿಟ್ಟರವರ ನಿವಾಸ ಸ್ಥಳಗಳನು II 8 ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ I ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ II 9 ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ I ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ II 10 “ಅವರ ದೇವರೆಲ್ಲಿ?” ಎಂದು ಮ್ಲೇಚ್ಛರು ಆಡಿಕೊಳ್ಳುವುದೇಕೆ? I ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ ಸುರಿಸಿದವರಿಗೆ I ಆಗರ್ಥವಾಗುವುದವರಿಗೆ; ಕಾಣಲಿ ಅದು ನಮ್ಮ ಕಣ್ಗಳಿಗೆ II 11 ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು I ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು II 12 ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ I ಎರಗಲಿ ಏಳ್ಮಡಿ ದಂಡನೆ ಅವರೆದೆಯ ಮೇಲೆ II 13 ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ I ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ I ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India