ಕೀರ್ತನೆಗಳು 76 - ಕನ್ನಡ ಸತ್ಯವೇದವು C.L. Bible (BSI)ದೇವನು ಭಯಂಕರನು 1 ಸುಪ್ರಸಿದ್ಧನು ದೇವನು ಜುದೇಯನಾಡಿನಲಿ I ಸುಪ್ರಖ್ಯಾತ ಆತನ ನಾಮ ಇಸ್ರಯೇಲಿನಲಿ II 2 ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II 3 ಚೂರು ಚೂರು ಮಾಡಿಹನಲ್ಲಿ ಥಳಥಳಿಸುವ ಬಾಣಗಳನು I ಖಡ್ಗ, ಗುರಾಣಿ ಎಂಬೆಲ್ಲ ಯುದ್ಧಾಯುಧಗಳನು II 4 ಹೇ ದೇವಾ, ನೀ ತೇಜೋಮಯನು I ಸ್ಥಿರಗಿರಿಗಳಿಗಿಂತ ಗಂಭೀರನು II 5 ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II 6 ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II 7 ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II 8 ನಿನ್ನ ನಿರ್ಣಯ ಸಗ್ಗದಿಂದ ಕೇಳಿಸಿದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II 9 ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II 10 ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ I ಅಳಿದುಳಿದಾ ಕೋಪ ನಿನ್ನ ನಡುಕಟ್ಟಿಗೆ ಲಾಯಕ II 11 ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ ಹರಕೆ I ಸುತ್ತಣರೆಲ್ಲರು ಸಮರ್ಪಿಸಲಿ ಭಯಂಕರನಿಗೆ ಕಾಣಿಕೆ II 12 ಅರಸರ ದರ್ಪವನಡಗಿಸಿಬಿಡುವನು I ಭೂಪತಿಗಳಿಗೋ ಕಂಪನ ಕೊಡುವನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India