ಕೀರ್ತನೆಗಳು 73 - ಕನ್ನಡ ಸತ್ಯವೇದವು C.L. Bible (BSI)ಭಾಗ - ೩ ( ಕೀರ್ತ. 73—89 ) ಸಿರಿವಂತ ದುರ್ಜನರ ದುರ್ಗತಿ 1 ದೇವನು ಎನಿತೋ ಒಳ್ಳೆಯವನು ಇಸ್ರಯೇಲಿಗೆ I ದಯಾಪರನಾತನು ಶುದ್ಧಹೃದಯಿಗಳಿಗೆ II 2 ದುರ್ಜನರು ಧನಿಕರಾಗುವುದ ಕಂಡಾಗ I ಗರ್ವಿಗಳ ನೋಡಿ ನಾನಸೂಯೆಗೊಂಡಾಗ II 3 ತಡವರಿಸಿದವು ನನ್ನ ಕಾಲುಗಳು I ಜಾರಿ ಬೀಳಲಿದ್ದವು ಹೆಜ್ಜೆಗಳು II 4 ಆ ಜನರಿಗೆ ನೋವುಕಾವೆಂಬುದಿಲ್ಲ I ಅವರ ದೇಹ ಸಬಲವಾಗಿದೆಯಲ್ಲ! II 5 ಇತರರಂತೆ ಅವರಿಗೆ ಸಂಕಟವಿಲ್ಲವಲ್ಲಾ! I ರೋಗರುಜೆ ಅವರಿಗಂಟುವುದಿಲ್ಲವಲ್ಲಾ! II 6 ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ I ಹಿಂಸಾಚಾರವೇ ಅವರಿಗೆ ಬಟ್ಟೆಬರೆ II 7 ದೋಷ ಹೊರಸೂಸುತ್ತಿದೆ ಕೊಬ್ಬಿನಾ ಕಣ್ಗಳಿಂದ I ದುಷ್ಕಲ್ಪನೆಗಳು ತುಳುಕುತಿವೆ ಹೃನ್ಮನಗಳಿಂದ II 8 ಕೇಡು ಮಾತು, ಕೆಣಕು ಮಾತು ಅವರದು I ಜೊತೆಗೆ ಬಲಾತ್ಕಾರದ ಸೊಕ್ಕು ಮಾತು II 9 ನಾಕವನೆ ತಾಕುತಿದೆ ಅವರ ಗರ್ವದ ನುಡಿ I ಜಗದಲಿ ಹರಡುತಿದೆ ಅವರ ದರ್ಪದ ನುಡಿ II 10 ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು I ನೀರಂತೆ ಅವರ ಮಾತನು ಹೀರಿಕೊಳ್ಳುವರು II 11 “ಆ ದೇವನೆಂತು ಕಂಡುಹಿಡಿದಾನು?” ಎಂಬರು I “ಪರಾತ್ಪರನು ಪರಿಜ್ಞನೆ?” ಎಂದುಕೊಳ್ವರು II 12 ದುರ್ಜನರಿದೊ ನಿಶ್ಚಿಂತರಾಗಿಹರು I ಸಿರಿಮೇಲೆ ಸಿರಿಯ ಶೇಖರಿಸುತಿಹರು II 13 ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? I ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? II 14 ಏಕೆನೆ, ದಿನವಿಡಿ ನಾ ಬಾಧೆಪಡುತ್ತಿರುವೆ I ದಿನದಿನವು ದಂಡನೆಗೆ ಗುರಿಯಾಗುತ್ತಿರುವೆ II 15 ನಾ ಬಾಯ್ದೆರೆದು ನುಡಿದಿದ್ದೆನಾದರೆ ಈ ಪರಿ I ನಿನ್ನ ಭಕ್ತಕುಲಕೆ ನಾ ದ್ರೋಹಿಯೇ ಸರಿ II 16 ಇದರ ಮರ್ಮವನು ನಾ ಬಗೆಹರಿಸಲು ಯತ್ನಿಸೆ I ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ II 17 ಆದರೆ ದೇವಾಲಯವನು ಹೊಕ್ಕು ನಿಂತಾಗ I ಆ ಜನರ ಅಂತಿಮ ಗತಿಯನಾಲೋಚಿಸಿದಾಗ I ಋಜುವಾದ ಜ್ಞಾನೋದಯ ಆಯಿತೆನಗಾಗ II 18 ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ I ನಿಶ್ಚಯವಾಗಿ ನೀ ಬೀಳಿಸಿ ಅವರನು ನಾಶಮಾಡುವೆ II 19 ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II 20 ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II 21 ಹೃದಯ ನೊಂದು ಬೆಂದಿರಲು I ಮನದಲಿ ಅಲಗು ನಾಟಿರಲು II 22 ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ I ನಾ ವನ್ಯಮೃಗನಂತಿದ್ದೆ ನಿನ್ನ ಮುಂದೆ II 23 ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ I ನೀ ಹಿಡಿದಿರುವೆ ನನ್ನ ಬಲಗೈಯನು ಭದ್ರವಾಗಿ II 24 ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು I ಅಂತ್ಯದಲಿ ನಿನ್ನ ಮಹಿಮೆಗೆನ್ನ ಸೇರ್ಪಡಿಸು II 25 ನನಗೆ ನೀನಲ್ಲದೆ ಇನ್ನಾರಿಹರು ಪರದಲಿ I ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ II 26 ನನ್ನ ತನುಮನಗಳೆಲ್ಲವೂ ಸೊರಗಿಹೋದರೂ I ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು II 27 ವಿನಾಶವಾಗುವರು ನಿನ್ನಿಂದ ದೂರ ಸರಿವವರು I ಧ್ವಂಸವಾಗುವರು ನಿನಗೆ ದ್ರೋಹವೆಸಗಿದವರು II 28 ನಿನ್ನ ಸಾನ್ನಿಧ್ಯ ಸ್ವಾಮಿದೇವಾ, ನನಗೆಂಥ ಸೌಭಾಗ್ಯ I ನಿನ್ನ ಸತ್ಕಾರ್ಯಗಳ ಸಾರಲೆಂದೆ ನಿನ್ನನಾಶ್ರಯಿಸಿಕೊಂಡೆನಯ್ಯಾ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India