ಕೀರ್ತನೆಗಳು 71 - ಕನ್ನಡ ಸತ್ಯವೇದವು C.L. Bible (BSI)ವೃದ್ಧನ ಪ್ರಾರ್ಥನೆ 1 ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ I ಆಶಾಭಂಗವಾಗದಿರಲೆಂದು ನಾ ಬೇಡುವೆ II 2 ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ I ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ II 3 ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು I ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು II 4 ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ I ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ II 5 ಸ್ವಾಮಿ ದೇವಾ, ನೀನೇ ನನ್ನ ಭರವಸೆ I ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ II 6 ಹುಟ್ಟಿನಿಂದಲೆ ನಾ ನಿನಗಂಟಿಕೊಂಡಿರುವೆನಯ್ಯಾ I ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ I ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ II 7 ಹಲವರಿಗೆ ನಾನೊಂದು ಒಗಟು I ನೀನೆನಗೆ ಬಲವಾದ ನೆಲೆಗಟ್ಟು II 8 ನಿನ್ನ ಗುಣಗಾನ ನನ್ನ ಬಾಯ್ತುಂಬ I ನಿನ್ನ ಘೋಷಣೆ ನನಗೆ ದಿನವಾದ್ಯಂತ II 9 ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II 10 ನನಗೆದುರಾಗಿ ಶತ್ರುಗಳಾಲೋಚಿಸುತಿಹರಯ್ಯಾ I ನನ್ನ ಕೊಲೆಗಾಗಿ ಒಂದುಗೂಡಿ ಹೊಂಚಿಸುತಿಹರಯ್ಯಾ II 11 “ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು ಕೈಬಿಟ್ಟಿಹನು I ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತಿಹರು II 12 ಓ ದೇವಾ, ದೂರವಾಗಿರಬೇಡಯ್ಯಾ I ನೆರವಾಗಲು ಬೇಗ ತ್ವರೆಮಾಡಯ್ಯಾ II 13 ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ ಕಂಟಕರನು I ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು ಬಗೆವವರನು II 14 ನಾನಂತು ನಂಬಿರುವೆ ನಿನ್ನ ನಿರಂತರವಾಗಿ I ನಿನ್ನನು ಕೀರ್ತಿಸುತ್ತಿರುವೆ ಅಧಿಕಾಧಿಕವಾಗಿ II 15 ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು I ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು II 16 ಸ್ವಾಮಿ ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ I ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ II 17 ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ? I ನಿನ್ನ ಅದ್ಭುತಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ II 18 ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II 19 ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ ಮುಟ್ಟುತ್ತಿಹವು I ಮಹತ್ಕಾರ್ಯಗಳೆಸಗಿದ ನಿನಗೆ ದೇವಾ, ಯಾರು ಸಾಟಿಯು? II 20 ದೇವಾ, ಈಡು ಮಾಡಿದೆಯೆನ್ನನು ಕಷ್ಟಸಂಕಟಗಳಿಗೆ I ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ II 21 ನನ್ನ ಗೌರವವನು ಅಧಿಕರಿಸಯ್ಯಾ I ಮರಳಿ ನೆಮ್ಮದಿಯನು ಪಾಲಿಸಯ್ಯಾ II 22 ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ I ಕಿನ್ನರಿಯನು ನುಡಿಸುತಾ ಭಜಿಸುವೆನಯ್ಯಾ II ಇಸ್ರಯೇಲಿನ ಆ ಪರಮಪಾವನ ಸ್ವಾಮಿಯ I ವೀಣೆವಾದ್ಯದೊಂದಿಗೆ ಕೀರ್ತಿಸುವೆನಯ್ಯಾ II 23 ಮಧುರದನಿಗೈವುದು ಎನ್ನಧರ ನಿನ್ನ ಗುಣಗಾನದಲಿ I ನೀನುದ್ಧರಿಸಿದ ಎನ್ನ ಮನ ಭಾಗಿಯಾಗುವುದಾ ಗಾನದಲಿ II 24 ನನಗೆ ಕೇಡು ಬಗೆದವರಿದೋ ಪಡೆದರು ನಿಂದೆ ಅಪಮಾನವನು I ದಿನವೆಲ್ಲ ವರ್ಣಿಪುದೆನ್ನ ನಾಲಿಗೆ ನಿನ್ನೀ ನೀತಿಸಾಧನೆಯನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India