Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 66 - ಕನ್ನಡ ಸತ್ಯವೇದವು C.L. Bible (BSI)


ದೇವರ ಮಹತ್ಕಾರ್ಯಗಳಿಗಾಗಿ ವಂದನೆ

1 ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I

2 ಹಾಡಲಿ ಆತನ ಶ್ರೀನಾಮ ಮಹಿಮೆಗೆ II

3 “ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II

4 ಜಗವೆಲ್ಲ ಪೂಜಿಪುದು ನಿನ್ನನು I ಪೊಗಳಿ ಮಾಳ್ಪುದು ಗುಣಗಾನವನು I ಕೀರ್ತಿಸುವುದು ನಿನ್ನ ನಾಮವನು” II

5 ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II

6 ಒಣನೆಲವಾಗಿ ಮಾರ್ಪಡಿಸಿದ ಕಡಲನು I ಕಾಲು ನಡೆಯಲೇ ದಾಟಿಸಿದ ನದಿಯನು I ಇದ ನಿಮಿತ್ತ ಪಡೆಯೋಣ ಆನಂದವನು II

7 ಆತನಾಳ್ವಿಕೆ ಶಕ್ತಿಯುತ, ನಿರಂತರ I ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I ಜಂಬ ಕೊಚ್ಚದಿರಲಿ ದಂಗೆಕೋರ II

8 ಜನಾಂಗಗಳೇ, ನಮಿಸಿರಿ ನಮ್ಮ ದೇವನನು I ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II

9 ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I ಕಾಲೆಡವದಂತೆ ಕಾಪಾಡಿದನಯ್ಯಾ II

10 ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ I ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ II

11 ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ I ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ II

12 ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ I ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ I ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ II

13 ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ I ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ II

14 ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು I ಸಂಕಟಕಾಲದಲಿ ನಾ ಮಾಡಿದ ವ್ರತವನು II

15 ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ I ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ I ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ II

16 ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II

17 ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II

18 ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II

19 ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ I ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ II

20 ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು