Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 65 - ಕನ್ನಡ ಸತ್ಯವೇದವು C.L. Bible (BSI)


ಮಳೆಬೆಳೆಗಳಿಗಾಗಿ ಲೋಕಪಾಲನಿಗೆ ವಂದನೆ

1 ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ ಸ್ತುತಿಸ್ತೋತ್ರಗಳು I ಪೂರೈಸತಕ್ಕವು ದೇವಾ, ಜನರು ನಿನಗೆ ಹೊತ್ತ ಹರಕೆಗಳು II

2 ದೇವಾ, ನೀ ನಮ್ಮೆಲ್ಲರ ಪ್ರಾರ್ಥನೆಗೆ ಕಿವಿಗೊಡುವಾತ I ನರರೆಲ್ಲರು ಬರುವರು ನಿನ್ನ ಬಳಿಗೆ ಪಾಪದ ಪ್ರಯುಕ್ತ II

3 ಪಾಪದ ಹೊರೆ ಹೊತ್ತವರು ನಾವಯ್ಯಾ I ಅವುಗಳ ಪರಿಹಾರಕನು ನೀನಯ್ಯಾ II

4 ನಿನ್ನ ಆಸ್ಥಾನದಲಿ ನೆಲೆಸಲು ನೀನಾಯ್ದು ತಂದ ದೈವಭಕ್ತ ಧನ್ಯ I ನಮಗೆ ತರಲಿ ತೃಪ್ತಿ ನೀ ವಾಸಿಸುವ ಪವಿತ್ರಾಲಯದ ಸೌಭಾಗ್ಯ II

5 ದೇವಾ, ನೀನೆ ನಮ್ಮೆಲ್ಲರ ಜೀವೋದ್ಧಾರ I ದೂರದ ಸಾಗರ ಸೀಮೆಗಳಿಗೂ ಆಶಾಧಾರ I ಗಂಭೀರ ಕಾರ್ಯವೆಸಗಿ ನೀಡುವೆ ವಿಜಯದುತ್ತರ II

6 ಬಿಗಿದುಕೊಂಡಿರುವೆ ಶಕ್ತಿಶೌರ್ಯದ ನಡುಗಟ್ಟನು I ಬಿಗಿಯಾಗಿ ನಿಲ್ಲಿಸಿರುವೆ ನೀ ಗುಡ್ಡಬೆಟ್ಟಗಳನು II

7 ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು I ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು II

8 ಅಚ್ಚರಿಗೊಳ್ಳುವುವು ನಿನ್ನ ಮಹತ್ಕಾರ್ಯಗಳ ಕಂಡು ಎಲ್ಲೆ ಎಲ್ಲೆಗಳು I ಹರ್ಷಾನಂದಗೊಳ್ಳುವರು ಅದಕಂಡಾ ಪೂರ್ವಪಶ್ಚಿಮ ಪ್ರವಾಸಿಗಳು II

9 ಇಳೆಯನು ಸಂಧಿಸಿ, ಮಳೆಯನು ಸುರಿಸಿ, ನೆಲವನು ನೀ ಸಿರಿಗೊಳಿಸುವಾತ I ನಾಲೆ ತುಂಬ ನೀರಹರಿಸಿ, ಹೊಲ ತುಂಬ ನೀ ಧಾನ್ಯನೀಡುವಾತ II

10 ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ I ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ II

11 ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ I ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ II

12 ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿನಿಂದ I ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ II

13 ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ I ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ I ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು