ಕೀರ್ತನೆಗಳು 64 - ಕನ್ನಡ ಸತ್ಯವೇದವು C.L. Bible (BSI)ಶತ್ರುಗಳ ವಿರುದ್ಧ ಸಹಾಯ ಕೋರಿಕೆ 1 ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ I ಕಾಪಾಡು, ಶತ್ರುಗಳ ಭಯವಿದೆ ನನಗೆ II 2 ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ I ಕಾದಿರಿಸೆನ್ನ ದುರುಳರ ದೊಂಬಿಯಿಂದ II 3 ನಾಲಗೆಯೆಂಬ ಅಲಗನವರು ಮಸೆದಿಹರು I ನಂಜುಮಾತೆಂಬ ಅಂಬನು ಹೂಡಿಹರು II 4 ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ I ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ II 5 ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು I “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು? II 6 ಅವರು ಹೂಡಿರುವುದು ಕುತಂತ್ರವನು I ಕೊಚ್ಚಿಕೊಳ್ವುದು ಚತುರೋಪಾಯವನು I ಅಶೋಧ್ಯ ಮಾನವನ ಹೃನ್ಮನಗಳು! II 7 ಆದರೆ ಎಸೆವನು ಬಾಣವನು ದೇವನೆ I ಪಡೆವರು ಅಪಘಾತವನು ಫಕ್ಕನೆ II 8 ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು I ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು II 9 ಜನರೆಲ್ಲರಾಗ ತಲ್ಲಣಗೊಳ್ಳುವರು I ದೇವಕಾರ್ಯವಿದು ಎಂದು ಧ್ಯಾನಿಪರು I ಆತನ ಸತ್ಕಾರ್ಯಗಳನು ಸಾರುವರು II 10 ಹರ್ಷಿಸಲಿ ಸಜ್ಜನರು ಪ್ರಭುವಿನಲಿ I ಆಶ್ರಯ ಪಡೆಯಲೀಗಲೆ ಆತನಲಿ I ನೇರ ಹೃದಯಿಗಳೆಲ್ಲರು ಹಿಗ್ಗಲಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India