Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 63 - ಕನ್ನಡ ಸತ್ಯವೇದವು C.L. Bible (BSI)


ದೇವರಿಗಾಗಿ ಹಂಬಲ

1 ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ I ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ I ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ II

2 ನಿನ್ನ ಮಂದಿರದಲಿ ನನಗಾದ ದರ್ಶನದಲಿ I ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ II

3 ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ I ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ II

4 ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ I ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ II

5 ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ I ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ II

6 ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ I ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ II

7 ನನಗೆ ನೀನು ನಿರಂತರದ ಸಹಾಯಕ I ನಿನ್ನ ರೆಕ್ಕೆಗಳಡಿ ನಾ ಸುಖಿ ಗಾಯಕ II

8 ನನ್ನಾತ್ಮ ನಿನಗಾತುಕೊಂಡಿದೆ I ನಿನ್ನ ಬಲಗೈ ನನಗಿಂಬಾಗಿದೆ II

9 ಕೇಡು ಬಗೆಯುವವರು ನನ್ನ ಪ್ರಾಣಕೆ I ಇಳಿದು ಹೋಗುವರು ಅಧೋಲೋಕಕೆ II

10 ಕತ್ತಿಗವರು ತುತ್ತಾಗುವರು I ನರಿತೋಳಗಳ ಪಾಲಾಗುವರು II

11 ಹರ್ಷಿಸುವನು ರಾಜಾಧಿರಾಜನು ದೇವನಲಿ I ಸಂತೋಷಿಸುವರು ಆಣೆಯಿಟ್ಟವರು ಆತನಲಿ I ಸದ್ದಿಲ್ಲದಂತಾಗ್ವುದು ಸುಳ್ಳಾಡಿದ ಬಾಯಿ ಅಲ್ಲಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು