ಕೀರ್ತನೆಗಳು 59 - ಕನ್ನಡ ಸತ್ಯವೇದವು C.L. Bible (BSI)ನಿರ್ದೋಷಿಯ ಕೋಪಾವೇಷ 1 ಶತ್ರುಗಳಿಂದ ದೇವಾ, ತಪ್ಪಿಸು I ಎದುರಾಳಿಗಳಿಂದೆನ್ನ ರಕ್ಷಿಸು II 2 ಕೇಡಿಗರಿಂದೆನ್ನ ಬಿಡಿಸು I ಕೊಲೆಪಾತಕರಿಂದ ಉಳಿಸು II 3 ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು I ನನ್ನ ಮೇಲೆರಗಲು ಹೂಡಿರುವ ಕ್ರೂರಿಗಳ ಸಂಚು II 4 ನಿರಪರಾಧಿ, ನಿರ್ದೋಷಿ ನಾನಾದರು I ಮೇಲೆ ಬೀಳಲಿದೋ ಸಜ್ಜುಗೊಂಡಿಹರು I ಎಚ್ಚೆತ್ತು ಪ್ರಭು, ನನಗೆ ನೆರವಾಗಿರು II 5 ಇಸ್ರಯೇಲರ ದೇವ, ಸೇನಾಧೀಶ್ವರ ಪ್ರಭು, ನೀನು I ದಂಡಿಸು ನೀನೆಚ್ಚರಗೊಂಡು ಅನ್ಯಜನರೆಲ್ಲರನು I ತೋರಬೇಡ ದುರುಳ ದ್ರೋಹಿಗಳಾರಿಗೂ ದಯೆಯನು II 6 ಸಂಜೆಯಾದುದೆ ಓಡಿ ಬರುವರು ನಾಯಿಗಳಂತೆI ಗುರುಗುಟ್ಟುತ ಊರ ಸುತ್ತುವರು ಕುನ್ನಿಗಳಂತೆ II 7 ಅವರ ಬಾಯಿ ಬೊಗಳುವ ಮಾತುಗಳನು ಕೇಳು I ಅವರ ತುಟಿಗಳು ಹರಿತ ಕತ್ತಿಕಠಾರಿಗಳು I ನಮಗಾರು ಕಿವಿಗೊಡರೆಂಬುದೆ ಅವರ ಗೋಳು II 8 ನೀನಾದರೋ ಪ್ರಭು, ಅವರನು ನೋಡಿ ನಗುವೆ I ಅನ್ಯಜನರನು ಅಪಹಾಸ್ಯಕ್ಕೀಡು ಮಾಡುವೆ II 9 ನನ್ನ ಶಕ್ತಿಯೇ, ನಿನಗಾಗಿ ನಾ ಕಾದಿರುವೆ I ನನ್ನಾಶ್ರಯ ದುರ್ಗ, ದೇವಾ, ನೀನೇ ಅಲ್ಲವೆ II 10 ಪ್ರೀತಿಯಿಂದ ನೆರವಾಗುವನು ದೇವನೆನಗೆ I ಶತ್ರುಗಳಿಗಾದ ಸೋಲನು ತೋರಿಸುವನೆನಗೆ II 11 ಕೊಲಬೇಡಾ ದ್ರೋಹಿಗಳನು ಫಕ್ಕನೆ I ಮರೆತಾರೆನ್ನ ಜನತೆ ಪಾಠ ಕಲಿಯದೆ II ಚದರಿಸು ಶಕ್ತಿಯಿಂದ, ಅಲೆಯಲಿ ದಿಕ್ಕುತೋಚದೆ I ಆ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ ರಕ್ಷೆ II 12 ಪಾಪವಿದೆ ಬಾಯಲಿ, ದೋಷವಿದೆ ತುಟಿಯಲಿ I ಸುಳ್ಳಿದೆ ಮಾತಲಿ, ಶಾಪವಿದೆ ನುಡಿಯಲಿ I ಅವರ ಸೊಕ್ಕಿನಲಿ ಅವರೇ ಸಿಕ್ಕಬೀಳಲಿ II 13 ಸುಟ್ಟು ನೀ ಭಸ್ಮಮಾಡು ಕೋಪಾಗ್ನಿಯಿಂದ I ಸ್ಪಷ್ಟವಾಗಲಿ ಇಡೀ ಲೋಕಕ್ಕಿದರಿಂದ I ದೇವನಾಳುತಿಹನೆಂದು ಇಸ್ರಯೇಲಿನಿಂದ II 14 ಸಂಜೆಯಾದುದೆ ಓಡಿಬರುವರು ನಾಯಿಗಳಂತೆ I ಗುರುಗುಟ್ಟುತ ಊರ ಸುತ್ತುವರು ಕುನ್ನಿಗಳಂತೆ II 15 ಅನ್ನಕ್ಕಾಗಿ ಅಲೆದಾಡುವರು ಅತ್ತಿತ್ತಾ I ಹೊಟ್ಟೆತುಂಬದಿರೆ ಅಡ್ಡಾಡುವರು ಬೊಗಳುತ್ತಾ II 16 ನಾನಾದರೊ ಹೊಗಳಿ ಹಾಡುವೆ ದೇವಾ, ನಿನ್ನ ಸಾಮರ್ಥ್ಯವನು I ಉದಯಕಾಲದಲೆ ನಾ ಸಂಕೀರ್ತಿಸುವೆ ನಿನ್ನ ಪ್ರೀತಿ ಪ್ರೇಮವನು I ಸಂಕಟದಲ್ಲೆನಗಾದ ಆಶ್ರಯಗಿರಿ, ದುರ್ಗ, ನೀನಲ್ಲವೇನು? II 17 ನೀನೆನ್ನ ಶಕ್ತಿದೇವಾ, ನಿನಗೆನ್ನ ಸ್ತುತಿ I ನೀನೆನ್ನ ದುರ್ಗ, ತೋರಿಸು ಎನಗೆ ಪ್ರೀತಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India