ಕೀರ್ತನೆಗಳು 58 - ಕನ್ನಡ ಸತ್ಯವೇದವು C.L. Bible (BSI)ನ್ಯಾಯಾಧೀಶರೋ ಅನ್ಯಾಯಾಧೀಶರೋ? 1 ಜನನಾಯಕರೇ, ನ್ಯಾಯಬದ್ಧವೊ ನಿಮ್ಮ ತೀರ್ಪುಗಳು I ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ ನಿರ್ಣಯಗಳು? II 2 ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ I ಧರೆಗೀಯುತ್ತೀರಿ ಹಿಂಸಾಚಾರವನು ತೂಕದಲಿ II 3 ದುರುಳರು ದಾರಿತಪ್ಪಿದವರು ಉದರದಿಂದಲೆ I ಸಟೆಯಾಡುವ ಅಕ್ರಮಿಗಳವರು ಹುಟ್ಟಿನಿಂದಲೆ II 4 ಸರ್ಪಗಳಂತಾ ಜನ ವಿಷಭರಿತ I ನಾಗರದಂತೆ ಅವರ ಕಿವಿ ಮಂದ II 5 ಒಲಿಯದವರ ಕಿವಿ ಪುಂಗಿಯ ನಾದಕೆ I ಮಣಿಯವು ಹಾವಾಡಿಗನ ಮಾಟಕೆ II 6 ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II 7 ಅವರಾಗಲಿ ಬೇಗನೆ ಕಾಣದೆ ಹೋಗುವ ತೊರೆಯಂತೆ I ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ ಗರಿಕೆಕಣದಂತೆ II 8 ನುಸುಳಿ ನುಸುಳಿ ನಶಿಸಿಹೋಗಲಿ ಬಸವನ ಹುಳದಂತೆ I ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ ಪಿಂಡದಂತೆ II 9 ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ ಮುಳ್ಳಿನಂತೆ I ನಿಶ್ಯೇಷವಾಗಲಿ ದೇವಕೋಪಾಗ್ನಿಗೆ ಸಿಲುಕಿದಂತೆ II 10 ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ I ಕಾಲುತೊಳೆಯುವರವರು ಆ ದುರ್ಜನರ ನೆತ್ತರಲಿ II 11 “ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ I ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ,” ಇದು ನಾಣ್ನುಡಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India