Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 57 - ಕನ್ನಡ ಸತ್ಯವೇದವು C.L. Bible (BSI)


ದೇವರ ಪ್ರೀತಿ ಮತ್ತು ಸತ್ಯತೆ

1 “ಕರುಣಿಸೆನ್ನನು, ಕರುಣಿಸು, ದೇವನೇ I ನನ್ನಾತ್ಮದ ಆಸರೆಯು ನೀನೇ II ನನ್ನ ಗಂಡಾಂತರವು ನೀಗುವ ಪರಿಯಂತ I ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ II

2 ನನ್ನ ಕಾರ್ಯವನು ಕೈಗೂಡಿಸುವ ದೇವನಿಗೆ I ನಾ ಮೊರೆಯಿಡುವೆ ಪರಾತ್ಪರನಾದಾ ಕರ್ತನಿಗೆ II

3 ಆತ ನೆರವಾಗುವನೆನಗೆ ಪರಲೋಕದಿಂದ I ತಪ್ಪಿಸುವನು ನನ್ನನು ಬೆನ್ನಟ್ಟಿ ಬರುವವರಿಂದ II ತೋರ್ಪಡಿಸುವನು ಸತ್ಯತೆಯನು I ತನ್ನ ಅಚಲ ಪ್ರೀತಿಯನಾ ದೇವನು II

4 ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ I ಅವುಗಳ ಹಲ್ಲುಗಳೊ ಭರ್ಜಿಬಾಣಗಳಂತಿವೆ I ನಾಲಿಗೆಗಳು ಹದವಾದ ಕತ್ತಿ ಕಠಾರಿಗಳಂತಿವೆ II

5 ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II

6 ಕಂಟಕ ಬಂದಿದೆ ನನ್ನ ಪ್ರಾಣಕೆ I ಹಾಕಿಹರು ಕಾಲಿಗೆ ಜೀರುಗುಣಿಕೆ II ತೋಡಿಹರು ಗುಂಡಿಯನು ನಾ ನಡೆವ ದಾರಿಯಲೆ I ತಾವೆ ತಟಕ್ಕನೆ ಬಿದ್ದುಹೋದರು ಅದರಲೆ II

7 ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ I ಹಾಡುತ ಪಾಡುತ ನಾ ರಚಿಸುವೆ ಗಾಯನ II

8 ಚೇತನಗೊಳ್ಳು ಮನವೇ, ಚೇತನಗೊಳ್ಳು I ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು I ಎಬ್ಬಿಸಿ ರವಿಯನು ಪ್ರಾತಃಕಾಲದೊಳು II

9 ನಿನ್ನ ಸ್ತುತಿಸುವೆನು ಪ್ರಭು ಜನಾಂಗಗಳ ಮುಂದೆ I ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ II

10 ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನಮಂಡಲವನು I ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲವನು II

11 ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ I ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು