ಕೀರ್ತನೆಗಳು 56 - ಕನ್ನಡ ಸತ್ಯವೇದವು C.L. Bible (BSI)ಶತ್ರುಪೀಡಿತನ ಪ್ರಾರ್ಥನೆ 1 ಕರುಣೆತೋರು ದೇವಾ, ಜನರೆನ್ನ ಬೆನ್ನಟ್ಟಿ ಬರುತಿಹರು I ದಿನವೆಲ್ಲ ಕದನ ಮಾಡಿ ಶತ್ರುಗಳೆನ್ನ ಬಾಧಿಸುತಿಹರು II 2 ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು I ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು ಹಲವರು II 3 ಹೆದರಿಕೆ ಉಂಟಾದಾಗ I ನೀನೆ ನನಗೆ ಆಶ್ರಯ II 4 ದೇವರಲ್ಲೇ ನಿರ್ಭೀತ ನಂಬಿಕೆ ನನಗೆ I ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ I ನರಮಾನವರು ಏನು ಮಾಡಿಯಾರೆನಗೆ? II 5 ಸದಾ ಅಪಾರ್ಥ ಕಟ್ಟುವರೆನ್ನ ಮಾತಿಗೆ I ಅವರು ಬಗೆವುದೆಲ್ಲಾ ಕೇಡೇ ನನಗೆ II 6 ಒಟ್ಟುಗೂಡಿ ಹೊಂಚುಹಾಕುತಿಹರು I ಹೆಜ್ಜೆಹಿಡಿದು ಕೊಲ್ಲ ಬರುತಿಹರು II 7 ಇಂಥಾ ದ್ರೋಹಿಗಳು ತಪ್ಪಿಸಿಕೊಳ್ಳಬಾರದಯ್ಯಾ I ರೌದ್ರದಿಂದಾ ಜನರನು ನೀ ಕೆಡವಿಬಿಡು ದೇವಾ II 8 ನನ್ನ ಅಲೆಮಾರಿತನದ ಲೆಕ್ಕವಿಟ್ಟಿರುವೆ ನಿನ್ನಲಿ I ನನ್ನ ಕಣ್ಣೀರನು ತುಂಬಿಡು ನಿನ್ನ ಬುದ್ದಲಿಯಲಿ I ಅದರ ಕತೆ ಬರೆದಿದೆಯಲ್ಲವೆ ನಿನ್ನ ಪುಸ್ತಕದಲಿ? II 9 ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ ಹಿಂದಕೆ I ದೇವನಿರುವುದು ನನ್ನ ಕಡೆ, ಇದು ಗೊತ್ತಿದೆ ನನಗೆ II 10 ನಾ ಹೆಮ್ಮೆಪಡುವುದು ದೇವನಲಿ, ಆತನ ವಾಗ್ದಾನದಲಿ I ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ ವಾಗ್ದಾನದಲಿ II 11 ದೇವರಲ್ಲೇ ನಿರ್ಭೀತ ನಂಬಿಕೆ ನನಗೆ I ನರಮಾನವರು ಏನು ಮಾಡಿಯಾರೆನಗೆ II 12-13 ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ I ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ I ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ II ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ I ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India