ಕೀರ್ತನೆಗಳು 52 - ಕನ್ನಡ ಸತ್ಯವೇದವು C.L. Bible (BSI)ದುರುಳರ ದುರ್ಗತಿ 1 ನೀಚಕಾರ್ಯವೆಸಗಿ ಹಿಗ್ಗುವ ಘನ ಮಾನವನೆ I ದೇವರ ಅನಂತ ಕೃಪೆಯನು ಪ್ರತಿಭಟಿಸುವವನೆ I ದೇವರ ದೃಷ್ಟಿಯಲಿ ನೀನು ಹೀನಾಯನೆ II 2 ಕ್ಷೌರಗತ್ತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ I ಕಲ್ಪಿಸುವೆಯಾ ದಿನವೆಲ್ಲಾ ನಾಶವಿನಾಶವನೆ? II 3 ಒಳಿತಿಗಿಂತ ಕೆಡಕು ಮಾಡುವುದು ನಿನಗಿಷ್ಟ I ಸತ್ಯಕ್ಕಿಂತ ಸುಳ್ಳಾಡುವುದೇ ನಿನ್ನ ಚಟ II 4 ಓ ನಾಲಿಗೆಯೇ, ನೀನು ಕಪಟ I ಹಾನಿಕರ ಮಾತೇ ನಿನಗಪ್ಪಟ II 5 ನಸುಕುವನು ದೇವರು ನಿನ್ನನು ನಿರುತ I ದೂರಮಾಡುವನು ನಿನ್ನಾ ಗುಡಾರದಿಂದ I ಕಿತ್ತೆಸೆದುಬಿಡುವನು ಜೀವದ ನಾಡಿಂದ II 6-7 ಸಜ್ಜನರು ಚಕಿತರಾಗುವರು ಕಂಡಿದನು I “ದೇವರನು ಆಶ್ರಯಿಸಿಕೊಳ್ಳದವನಿವನು I ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು I ತುಚ್ಛಕಾರ್ಯಗಳಲೆ ಹೆಚ್ಚಳಪಟ್ಟವನು” I ಎಂದು ಜರೆದು ಮಾಡುವರು ಪರಿಹಾಸ್ಯವನು II 8 ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆಮರದಂತಿರುವೆನು I ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು II 9 ನಿನ್ನುಪಕಾರವನು ಹೇ ದೇವಾ, ನಾ ಸದಾ ಸ್ಮರಿಸುವೆನು I ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ ಸ್ತುತಿಸುವೆನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India