ಕೀರ್ತನೆಗಳು 50 - ಕನ್ನಡ ಸತ್ಯವೇದವು C.L. Bible (BSI)ಕೃತಜ್ಞತೆಯೆ ಸ್ತುತ್ಯವಾದ ಬಲಿಯರ್ಪಣೆ 1 ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ I ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ II 2 ಸುರಸುಂದರವಾದ ಸಿಯೋನಿನಿಂದ I ಉದಯಸಿಹನು ದೇವನು ಶೋಭೆಯಿಂದ II 3 ಬರುತಿಹನು ನಮ್ಮ ದೇವನು, ಇನ್ನು ಸುಮ್ಮನಿರನಾತ I ಆತನ ಮುಂದೆ ಬೆಂಕಿಮಳೆ, ಸುತ್ತಲು ಚಂಡಮಾರುತ II 4 ಭೂಮ್ಯಾಕಾಶಗಳನು ಕರೆಯುತಿಹನು I ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು II 5 “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು I ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು II 6 ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ I ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ II 7 “ಎಲೈ ಪ್ರಜೆ ಇಸ್ರಯೆಲ್, ನಾನು ನಿನ್ನ ದೇವರು I ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು II 8 ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ I ನನ್ನ ಮುಂದಿವೆ ಸತತ ನಿನ್ನ ದಹನಬಲಿಗಳೆಲ್ಲ II 9 ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ I ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ II 10 ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ I ಗುಡ್ಡದಲ್ಲಿರುವ ಸಹಸ್ರಾರು ಪಶುಗಳು ನನ್ನವೆ II 11 ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II 12 ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ I ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ II 13 ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ? I ಹೋತಗಳ ರಕ್ತವನು ನಾ ಕುಡಿಯುವುದುಂಟೇ? II 14 ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ I ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ II 15 ಕಷ್ಟದಲಿ ಮೊರೆಯಿಡೆ, ನೆರವಾಗುವೆ I ಆಗ ನೀ ನನ್ನನು ಕೊಂಡಾಡುವೆ II 16 ದುರ್ಜನರಿಗೆ ದೇವ ಹೇಳುವನು ಇಂತೆಂದು I “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II 17 ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II 18 ಕಂಡೊಡನೆ ಬೇಕು ನಿಮಗೆ ಚೋರರ ಕೂಟ I ಸಾಕಾಗಿಲ್ಲ ನಿಮಗೆ ಜಾರರ ಒಡನಾಟ II 19 ನಿಮ್ಮ ಬಾಯನ್ನಾಳುತ್ತದೆ ಕೆಡುಕುತನ I ನಿಮ್ಮ ನಾಲಿಗೆ ನೇಯುತ್ತದೆ ಕಪಟತನ II 20 ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ I ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ II 21 ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ? I ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ? II ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು I ನೀವು ಅಪರಾಧಿಗಳೆಂದು ಸ್ಥಾಪಿಸದೆಬಿಡೆನು II 22 ದೇವನ ನೆನೆಯದವರೇ, ನೀಡಿರಿ ಗಮನವನು I ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು I ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು? II 23 ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು I ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India