Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 48 - ಕನ್ನಡ ಸತ್ಯವೇದವು C.L. Bible (BSI)


ಸಿಯೋನ್ ಶಿಖರ ಪವಿತ್ರ

1 ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I ದೇವನಗರದಲಿ ಆತನ ಪವಿತ್ರ ಪರ್ವತ II

2 ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I ಆನಂದದಾಯಕ ರಾಜಾಧಿರಾಜನ ಆ ನಗರ II

3 ಅದರ ಕೋಟೆಕೊತ್ತಲಗಳ ನಡುವೆ ದೇವನು I ತಾನೇ ಸುಭದ್ರ ದುರ್ಗವೆಂದು ತೋರಿಹನು II

4-5 ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು I ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು II

6 ನಡುಗುವಂತಾಯಿತಲ್ಲಿ ಗಡಗಡನೆ I ಪ್ರಸವ ವೇದನೆಯಂತಾಯಿತವರಿಗೆ II

7 ತಾರ್ಷಿಷ್ ನಾಡಿನ ದೊಡ್ಡ ದೊಡ್ಡ ಹಡಗುಗಳನು I ಚಂಡಮಾರುತದಿಂದ ಪುಡಿಪುಡಿ ಮಾಡಿದೆ ನೀನು II

8 ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು I ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು II

9 ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು I ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II

10 ನಿನ್ನ ನಾಮದಂತೆ ನಿನ್ನಾ ಹೊಗಳಿಕೆ I ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ I ದೇವಾ, ನೀತಿಭರಿತ ನಿನ್ನ ಆಳ್ವಿಕೆ II

11 ಸಿಯೋನ್ ಪಟ್ಟಣಿಗರು ಹರ್ಷಗೊಳ್ಳಲಿ I ಯೆಹೂದ್ಯ ನಗರಗಳು ಆನಂದಪಡಲಿ I ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ II

12 ಸಂಚಾರಮಾಡಿರಿ ಸಿಯೋನ್ ನಗರದೊಳು I ಮಾಡಿರಿ ಪ್ರದಕ್ಷಿಣೆ ಅದರ ಸುತ್ತಲು I ಲೆಕ್ಕವಿಲ್ಲದಿವೆ ನೋಡಿ ಗೋಪುರಗಳು II

13 ಕಣ್ಣಿಟ್ಟು ನೋಡಿರಿ ಅದರ ಕೋಟೆಗಳನು I ಚೆನ್ನಾಗಿ ಗಮನಿಸಿರಿ ಅದರ ಪ್ರಾಕಾರಗಳನು II

14 ಆಗ ತಿಳಿಸಿರಿ ಮುಂದಣ ಪೀಳಿಗೆಗಿಂತೆಂದು - “ಈತನೀತನೇ ನಮ್ಮ ದೇವನು ಯುಗಯುಗಕು I ನಮಗೀತ ಮಾರ್ಗದರ್ಶಕ ತಲತಲಾಂತರಕು” II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು