ಕೀರ್ತನೆಗಳು 47 - ಕನ್ನಡ ಸತ್ಯವೇದವು C.L. Bible (BSI)ದೇವನು ಸಾರ್ವಭೌಮನು 1 ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ I ಸರ್ವೇಶ್ವರನಿಗೆ ಜಯಜಯ ಘೋಷ ಮಾಡಿರಿ II 2 ಪರಾತ್ಪರನಾದ ಪ್ರಭುವು ಘನಗಂಭೀರನು I ಪ್ರಪಂಚಕ್ಕೆಲ್ಲ ರಾಜಾಧಿರಾಜನು II 3 ಜನಾಂಗಗಳನಾತ ನಮಗಧೀನಪಡಿಸಿಹನು I ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II 4 ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ I ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ II 5 ಏರಿದನು ಪ್ರಭು ಜಯಜಯಕಾರದೊಂದಿಗೆ I ಆರೋಹಣವಾದನು ತುತೂರಿನಾದ ಜೊತೆಗೆ II 6 ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ I ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ II 7 ದೇವನು ಭೂಮಂಡಲಕ್ಕೆಲ್ಲಾ ಒಡೆಯನು I ಕೀರ್ತನೆಯಿಂದ ಕೊಂಡಾಡಿರಿ ಆತನನು II 8 ವಹಿಸಿಕೊಂಡನು ದೇವನು ಸರ್ವಾಧಿಪತ್ಯ I ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ II 9 ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು I ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು II ಭೂಪಾಲರೆಲ್ಲರೂ ದೇವರಿಗೆ ಅಧೀನರು I ಸರ್ವೋನ್ನತನು, ಸಾರ್ವಭೌಮನು ದೇವರು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India